ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿದ್ದ (Shivamogga Assistant Commissioner) ಜಿ.ಎಚ್. ಸತ್ಯನಾರಾಯಣ ಅವರ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯಾಧಿಕರಣ (ಕೆಎಟಿ) ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ, ನಾಲ್ಕು ದಿನಗಳ ಹಿಂದಷ್ಟೇ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಡಾ. ಎಚ್.ಪಿ.ಎಸ್. ಮೈತ್ರಿ ಅವರ ಮುಂದಿನ ನಡೆ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.
ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಡಾ. ಎಚ್.ಪಿ.ಎಸ್. ಮೈತ್ರಿ ಅವರನ್ನು ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆಗಸ್ಟ್ 19ರಂದು ಆದೇಶ ಹೊರಡಿಸಿತ್ತು. ಈ ಬಗ್ಗೆ ಮಲೆನಾಡು ಟುಡೆ ವರದಿಯನ್ನು ಮಾಡಿತ್ತು. ಆನಂತರ , ಆದೇಶದ ಹಿನ್ನೆಲೆಯಲ್ಲಿ ಡಾ. ಎಚ್.ಪಿ.ಎಸ್. ಮೈತ್ರಿ ಅವರು ಆ.20ರಂದು ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ ಅವರು ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅವರಿಗೆ ಅಧಿಕಾರವನ್ನ ಹಿಂದಿನ ಎಸಿ ಹಸ್ತಾಂತರಿಸಿಲ್ಲ ಎನ್ನಲಾಗುತ್ತಿದೆ.
ಈ ಮಧ್ಯೆ ಶಿವಮೊಗ್ಗ ಉಪವಿಭಾಗಾಧಿಕಾರಿ ಸ್ಥಾನದಲ್ಲಿದ್ದ ಜಿ.ಎಚ್. ಸತ್ಯನಾರಾಯಣ ಅವರಿಗೆ ವರ್ಗಾವಣೆಯ ನಂತರದ ಸ್ಥಳವನ್ನು ವರ್ಗಾವಣೆ ಆದೇಶದಲ್ಲಿ ತೋರಿಸಿರಲಿಲ್ಲ. ಕೇವಲ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಈ ನಡುವೆ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಾಧಿಕರಣದ ಮೊರೆ ಹೋಗಿದ್ದ ಜಿ.ಎಚ್. ಸತ್ಯನಾರಾಯಣ ಅವರು, ವರ್ಗಾವಣೆಗೆ ತಡೆಯಾಜ್ಞೆ ಪಡೆದುಕೊಂಡಿರುವುದಾಗಿ ತಿಳಿಸಿ ನಿನ್ನೆ ಸೋಮವಾರ ಬೆಳಗ್ಗೆ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಸ್ಥಾನದಲ್ಲಿ ಆಸೀನರಾಗಿದ್ದಾರೆ.
ಸರಕಾರಿ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಮಾರ್ಗಸೂಚಿಯ ಪ್ರಕಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ಪದಾಧಿಕಾರಿಗಳಾಗಿರುವವರನ್ನು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಅವರ ಅಧಿಕಾರಾವಧಿ ಮುಗಿಯುವವರೆಗೆ ವರ್ಗಾವಣೆ ಮಾಡುವಂತಿಲ್ಲ ಎಂಬ ಉಲ್ಲೇಖವಿದೆ ಎನ್ನಲಾಗಿದೆ. ಇದೇ ನಿಯಮವನ್ನು ಆಧರಿಸಿ ಜಿ.ಎಚ್. ಸತ್ಯನಾರಾಯಣ ಅವರು ತಮ್ಮ ವರ್ಗಾವಣೆ ವಿರುದ್ಧ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದಾರೆ ಎನ್ನುತ್ತಿದೆ ಮೂಲಗಳು.
ಸೋಮವಾರ ಡಾ. ಎಚ್.ಪಿ.ಎಸ್. ಮೈತ್ರಿ ಅವರು ಕರ್ತವ್ಯದ ನಿಮಿತ್ತ ಭದ್ರಾವತಿಗೆ ತೆರಳಿದ್ದ ಸಂದರ್ಭದಲ್ಲಿ ಜಿ.ಎಚ್. ಸತ್ಯನಾರಾಯಣ ಅವರು ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಆಸೀನರಾಗಿದ್ದರು. ಈ ವಿಷಯ ತಿಳಿದ ಬಳಿಕ ಡಾ. ಮೈತ್ರಿ ಅವರು ಕಚೇರಿಗೆ ಮರಳಿದ್ದರು. ಈ ಸಂದರ್ಭದಲ್ಲಿ ಜಿ.ಎಚ್. ಸತ್ಯನಾರಾಯಣ ಹಾಗೂ ಡಾ. ಎಚ್.ಪಿ.ಎಸ್. ಮೈತ್ರಿ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಇಬ್ಬರೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಬಳಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಜಿ.ಎಚ್. ಸತ್ಯನಾರಾಯಣ ಅವರು ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದಿರುವ ವಿಷಯವನ್ನು ಜಿಲ್ಲಾಧಿಕಾರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧಿಕೃತ ಆದೇಶ ಬರುವವರೆಗೆ ಕಾಯುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಇಬ್ಬರಿಗೂ ತಿಳಿಸಿ ಸಮಾಧಾನಪಡಿಸಿ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ. ಇಂದು ನ್ಯಾಯಾಲಯದ ಆದೇಶ ಲಭ್ಯವಾಗುವ ಸಾಧ್ಯತೆ ಇದೆ. ಜಿ.ಎಚ್. ಸತ್ಯನಾರಾಯಣ ಅವರ ವರ್ಗಾವಣೆಗೆ ನೀಡಿರುವ ತಡೆಯಾಜ್ಞೆ ಅಧಿಕೃತವಾಗಿ ದೃಢಪಟ್ಟಲ್ಲಿ, ಈಗಾಗಲೇ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಎಚ್.ಪಿ.ಎಸ್. ಮೈತ್ರಿ ಅವರ ಮುಂದಿನ ನಡೆ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
