ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ ಮೀಸಲಾತಿ ಪಡೆಯುವ ವಿವಾಹಿತ ಮಹಿಳೆ ಹಾಗೂ ಪುರುಷ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವ ವೇಳೆ ಕುಟುಂಬದ ಆದಾಯವನ್ನು (Caste and Income Certificate Rules) ಯಾವ ರೀತಿಯಲ್ಲಿ ಲೆಕ್ಕ ಹಾಕಬೇಕು ಎಂಬ ಗೊಂದಲಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಪಷ್ಟನೆ ನೀಡಿದೆ. ವಿವಾಹಿತ ಅಭ್ಯರ್ಥಿಯ ಆದಾಯ ನಿರ್ಧರಿಸುವಾಗ ಅವರ ತಂದೆ-ತಾಯಿಯ ಆದಾಯವನ್ನು ಸೇರಿಸಬಾರದು ಎಂದು ಸರ್ಕಾರ ಆದೇಶಿಸಿದೆ. ಈ ಬಗೆಗಿನ ಪೂರ್ತಿ ಮಾಹಿತಿ ಇಲ್ಲಿದೆ ಓದಿ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಈ ಕುರಿತು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಉದ್ಯೋಗಗಳ ಮೀಸಲಾತಿಗಾಗಿ ನಡೆಯುವ ನೇರ ನೇಮಕಾತಿ ಸಂದರ್ಭದಲ್ಲಿ ವಿವಾಹಿತ ಮಹಿಳೆ ಹಾಗೂ ಪುರುಷ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವಾಗ ಅನುಸರಿಸಬೇಕಾದ ಆದಾಯ ಲೆಕ್ಕಾಚಾರದ ವಿಧಾನವನ್ನು ಇದರಲ್ಲಿ ಸ್ಪಷ್ಟಪಡಿಸಲಾಗಿದೆ. ಆದೇಶದ ಪ್ರಕಾರ, ವಿವಾಹಿತ ಮಹಿಳೆ ಅಥವಾ ಪುರುಷ ಅಭ್ಯರ್ಥಿಯ ಆದಾಯಕ್ಕೆ ಅವರ ತಂದೆ-ತಾಯಿಯ ಆದಾಯವನ್ನು ಸೇರಿಸಬಾರದು. ಪತಿ ಮತ್ತು ಪತ್ನಿ ಪ್ರತ್ಯೇಕ ಸ್ವತಂತ್ರ ಕುಟುಂಬವಾಗಿ ವಾಸಿಸುತ್ತಿದ್ದರೆ ಅಭ್ಯರ್ಥಿಯ ಆದಾಯದೊಂದಿಗೆ ಅವರ ಪತಿ ಅಥವಾ ಪತ್ನಿಯ ಆದಾಯವನ್ನು ಸೇರಿಸಿ ಕುಟುಂಬದ ಒಟ್ಟು ಆದಾಯವನ್ನು ನಿರ್ಧರಿಸಬೇಕು ಎಂದು ಸೂಚಿಸಲಾಗಿದೆ.
ಹಾಗೊಂದು ವೇಳೆ ವಿವಾಹಿತ ಅಭ್ಯರ್ಥಿ ಅವಿಭಕ್ತ ಕುಟುಂಬದ ಭಾಗವಾಗಿದ್ದರೆ, ಅಭ್ಯರ್ಥಿಯ ಆದಾಯದೊಂದಿಗೆ ಅವಿಭಕ್ತ ಕುಟುಂಬದ ಆದಾಯವನ್ನು ಒಟ್ಟುಗೂಡಿಸಿ ಕುಟುಂಬದ ಒಟ್ಟು ಆದಾಯವನ್ನು ಲೆಕ್ಕ ಹಾಕಬೇಕು ಎಂದು ಸರ್ಕಾರ ತಿಳಿಸಿದೆ. ಈ ಆದಾಯದ ಆಧಾರದಲ್ಲಿಯೇ ಸಂಬಂಧಪಟ್ಟ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ ಎಂದು ತಿಳಿಸಲಾಗಿದೆ.
ಈ ಹಿಂದೆ ಹೊರಡಿಸಲಾಗಿದ್ದ ಆದೇಶಗಳಲ್ಲಿ ಕುಟುಂಬದ ಆದಾಯವನ್ನು ಪರಿಗಣಿಸುವ ವಿಧಾನ ಹಾಗೂ ವಿವಾಹಿತ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳ ಆದಾಯವನ್ನು ಯಾವ ರೀತಿಯಲ್ಲಿ ಪರಿಗಣಿಸಬೇಕು ಎಂಬ ಕುರಿತು ಮಾರ್ಗಸೂಚಿಗಳಿದ್ದವು. ಆದರೆ ನೇರ ನೇಮಕಾತಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ವಿವಾಹದ ನಂತರ ಅಭ್ಯರ್ಥಿಯ ತಂದೆ-ತಾಯಿಯ ಆದಾಯವನ್ನು ಸೇರಿಸಬೇಕೇ ಅಥವಾ ಪತಿ-ಪತ್ನಿಯ ಆದಾಯವನ್ನು ಪರಿಗಣಿಸಬೇಕೇ ಎಂಬ ವಿಷಯದಲ್ಲಿ ಸ್ಪಷ್ಟತೆ ಬೇಕಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಸೂಚನೆಯನ್ನ ಹೊರಡಿಸಿದೆ ಎಂದು ತಿಳಿಸಲಾಗಿದೆ.
