ಶಿವಮೊಗ್ಗ : ಸ್ಥಳೀಯ ಸಂಸ್ಥೆಯ ಚುನಾವಣೆಯನ್ನೂ ಗೆಲ್ಲಲು ಸಾಧ್ಯವಾಗದ ವ್ಯಕ್ತಿಗೆ ಕಾಂಗ್ರೆಸ್​ ಪಕ್ಷ ಅನೇಕ ಅವಕಾಶ ನೀಡಿದೆ, ಈ ರೀತಿ ಆರೋಪಿಸುವುದು ತಪ್ಪು: ಕಲಗೋಡು ರತ್ನಾಕರ್​

ಹಂಚಿಕೊಳ್ಳಿ
WhatsApp Facebook X Telegram
ಹೆಚ್__ ಎಸ್_ ಸುಂದರೇಶ್__ ಆರೋಪಕ್ಕೆ ಕಲಗಗೋಡು ರತ್ನಾಕರ್_ ತಿರುಗೇಟು
ಹೆಚ್__ ಎಸ್_ ಸುಂದರೇಶ್__ ಆರೋಪಕ್ಕೆ ಕಲಗಗೋಡು ರತ್ನಾಕರ್_ ತಿರುಗೇಟು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಖಾಸಗಿ ಹೋಟೆಲ್ ಒಂದರಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸೂಡಾ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ರವರು, ಕಿಮ್ಮನೆ ರತ್ನಾಕರ್, ಮಧು ಬಂಗಾರಪ್ಪ, ಪ್ರಸನ್ನ ಕುಮಾರ್ ಸೇರಿದಂತೆ ಸ್ವಪಕ್ಷದ ನಾಯಕರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದರು. ಅದರಲ್ಲಿ ಕಲಗೋಡು ರತ್ನಾಕರ್ ಅವರನ್ನು ಸಹ ಹೊರತಾಗಿರಲಿಲ್ಲ. ಅವರಿಗೂ ಸೇರಿಸಿ ಆತ ಕಲಗೋಡು ರತ್ನಾಕರ್ ಟ್ರಾನ್ಸ್‌ಫರ್‌ಗಾಗಿ ಓಡಾಡುತ್ತಾರೆ, ಚುನಾವಣೆಗೆ ನೀಡಿದ ಹಣವನ್ನು ಹೊಡೆದಿದ್ದಾರೆ ಎಂಬೆಲ್ಲಾ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಆರೋಪಕ್ಕೆ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್ ಪ್ರತಿಕ್ರಿಯಿಸಿದ್ದು,   ಹೆಚ್. ಎಸ್. ಸುಂದರೇಶ್ ಮಾಡಿರುವ ಸುಳ್ಳು ಆರೋಪಗಳಿಗೆ ದಾಖಲೆ ಸಹಿತ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ 

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಬಲಿಷ್ಠ ಸಂಘಟನೆಯನ್ನು ಹೊಂದಿದೆ. ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ನಾಯಕತ್ವದಲ್ಲಿ ಸರ್ಕಾರದ ಜನಪರ ಆಡಳಿತ ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಮಾಡುತ್ತಿದ್ದಾರೆ. ಇದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜಿಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಸುಳ್ಳು ಹಾಗೂ ನಿರಾಧಾರ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.

ನಿನ್ನೆ ಪಕ್ಷದ ಮುಖಂಡರೊಬ್ಬರು ಜಿಲ್ಲಾ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು, ಸಚಿವರು ಮತ್ತು ಶಾಸಕರ ವಿರುದ್ಧ ವಿವಿಧ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಈ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಈಗಾಗಲೇ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ನಿಗದಿತ ಅವಧಿಯಲ್ಲಿ ಸಮರ್ಪಕ ಉತ್ತರ ನೀಡದಿದ್ದಲ್ಲಿ ಪಕ್ಷದ ನಿಯಮಾನುಸಾರ ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಕೆಪಿಸಿಸಿ ಕೈಗೊಳ್ಳಲಿದೆ ಎಂದು ಅವರು ಹೇಳಿದರು. 

ಒಂದು ಸ್ಥಳೀಯ ಸಂಸ್ಥೆಯ ಚುನಾವಣೆಯನ್ನೂ ಗೆಲ್ಲಲು ಸಾಧ್ಯವಾಗದ ವ್ಯಕ್ತಿಗೂ ಕಾಂಗ್ರೆಸ್ ಪಕ್ಷ ಹಲವು ಅವಕಾಶಗಳನ್ನು ನೀಡಿದೆ. ಭದ್ರಾ ಕಾಡಾ ಅಧ್ಯಕ್ಷರಾಗಿ ಹಾಗೂ ಸೂಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಕ್ಷ ನೀಡಿದೆ. ಪಕ್ಷ ನೀಡಿದ ಅವಕಾಶಗಳನ್ನು ಗೌರವಿಸಿ ಸಂಘಟನೆಯನ್ನು ಬಲಪಡಿಸುವ ಬದಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡುವುದು ಸರಿಯಾದ ಕ್ರಮವಲ್ಲ ಎಂದು ರತ್ನಾಕರ್ ಹೇಳಿದರು. 

ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಇಲ್ಲಿ ಯಾವುದೇ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದ ಆಡಳಿತ ಮತ್ತು ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕಾಗಿದೆ. ಜಿಲ್ಲಾ ಕಾಂಗ್ರೆಸ್ ಪಕ್ಷವು ಯಾವುದೇ ಒಬ್ಬ ವ್ಯಕ್ತಿಯಿಂದ ನಿರ್ಮಾಣವಾಗಿಲ್ಲ. ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಸಾವಿರಾರು ಮುಖಂಡರು, ಕಾರ್ಯಕರ್ತರ ಪರಿಶ್ರಮದಿಂದ ಸಂಘಟನೆ ಬೆಳೆದಿದೆ ಎಂದು ಅವರು ತಿಳಿಸಿದರು. 

ನಾನು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಮತ್ತು ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಹಂತ ಹಂತವಾಗಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಸಾರ್ವಜನಿಕ ಜೀವನದಲ್ಲಿ ಇಂದಿಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಯಾವುದೇ ಅಧಿಕಾರದ ಸ್ಥಾನಮಾನವಿಲ್ಲದಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದೇನೆ ಎಂದು ರತ್ನಾಕರ್ ಹೇಳಿದರು. 

ಆದರೂ ನನ್ನ ವಿರುದ್ಧ ಇಲ್ಲಸಲ್ಲದ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ಪೂರಕವಾದ ಯಾವುದೇ ದಾಖಲೆಗಳು ಅಥವಾ ಸಾಕ್ಷ್ಯಾಧಾರಗಳು ಇದ್ದಲ್ಲಿ ಅವುಗಳನ್ನು ಸಾರ್ವಜನಿಕವಾಗಿ ಅಥವಾ ಸಂಬಂಧಪಟ್ಟ ವೇದಿಕೆಯಲ್ಲಿ ಒದಗಿಸಲಿ. ಆರೋಪಗಳಿಗೆ ಸಾಕ್ಷ್ಯಾಧಾರಗಳಿದ್ದರೆ ಕಾನೂನುಬದ್ಧವಾಗಿ ಮತ್ತು ಪಕ್ಷದ ವೇದಿಕೆಯಲ್ಲಿ ಉತ್ತರಿಸಲು ನಾನು ಸಿದ್ಧನಿದ್ದೇನೆ.

ಆದರೆ ಯಾವುದೇ ದಾಖಲೆ ಅಥವಾ ಸಾಕ್ಷ್ಯವಿಲ್ಲದೆ ನಿರಾಧಾರ ಆರೋಪಗಳನ್ನು ಮಾಡುತ್ತಾ ಹೋಗುವುದನ್ನು ಕೇಳಿಸಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ವೈಯಕ್ತಿಕ ಟೀಕೆಗಳು ಹಾಗೂ ಸುಳ್ಳು ಆರೋಪಗಳ ಬದಲಾಗಿ ಪಕ್ಷದ ಸಂಘಟನೆ, ಜನಸೇವೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಹಾಗೂ ಈ ವಿಚಾರವಾಗಿ ಈಗಾಗಲೇ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಲಗೋಡು ರತ್ನಾಕರ್ ಅವರು ತಿಳಿಸಿದರು

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor