ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯನ್ನು ಸರ್ಕಾರವೇ ಖುದ್ದಾಗಿ ಅವರ ಮನೆಗೆ ತೆರಳಿ ಪ್ರದಾನ ಮಾಡಿ ಗೌರವಿಸಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕಾಗೋಡು ಅಪ್ಪಾಜಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇನೆ. ಕಾಗೋಡು ತಿಮ್ಮಪ್ಪಾಜಿಗೆ ರಾಜ್ಯೋತ್ಸವ ಅವಾರ್ಡ್ ಸಿಕ್ಕಿದ್ದು, ಆ ಅವಾರ್ಡ್ಗೆ ಗೌರವ ಹೆಚ್ಚಿದಂತಾಗಿದೆ. ಇದು ಅವರ ಲಕ್ಷಾಂತರ ಅಭಿಮಾನಿಗಳಿಗೆ ಹಾಗೂ ನಮಗೆ ಖುಷಿ ತಂದಿದೆ. ಈ ಕುರಿತಾಗಿ ಸಿಎಂ ಮತ್ತು ಡಿಕೆ ಶಿವಕುಮಾರ್ ಕಾಗೋಡು ಅಪ್ಪಾಜಿಗೆ ವಿಡಿಯೋ ಕಾಲ್ ಮಾಡಿ ಶುಭ ಹಾರೈಸಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಕಾಗೋಡು ಅಪ್ಪಾಜಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿಯೇ ಪ್ರಶಸ್ತಿ ಸ್ವೀಕರಿಸಬೇಕೆಂಬ ಆಸೆ ಇತ್ತು. ಆದರೆ ವಯೋಸಹಜ ಕಾರಣದಿಂದ ಕಾಗೋಡು ಅಪ್ಪಾಜಿಗೆ ಬೆಂಗಳೂರಿಗೆ ತೆರಳಿ ಪ್ರಶಸ್ತಿ ಸ್ವೀಕರಿಸುವುದು ಶ್ರಮದಾಯಕವಾಗಲಿದ್ದು, ಬೆಂಗಳೂರಿಗೆ ಬರುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಆದರೂ ಕೂಡ ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತೇವೆ ಬನ್ನಿ ಎಂದು ಡಿಕೆ ಶಿವಕುಮಾರ್ ಕೇಳಿದ್ದರು. ಆದರೆ ಸಾಧ್ಯವಿಲ್ಲ ಎಂದು ಕಾಗೋಡು ಅಪ್ಪಾಜಿ ಹೇಳಿದ್ದು, ಮುಂದಿನ ದಿನಗಳಲ್ಲಿ ಸರ್ಕಾರವೇ ಅವರ ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡಲಿದೆ ಎಂದಿದ್ದಾರೆ.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ, ಹಿರಿಯ ಪತ್ರಕರ್ತ ಡಿ. ಉಮಾಪತಿ, ಸಾಹಿತಿ ಇಂದಿರಾ ಹೆಗಡೆ, ಗದಗ ಡಾ. ಅನ್ನದಾನೀಶ್ವರ ಮಹಾಶಿವಯೋಗಿ ಅವರು ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. 71ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ 71 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
