ಜೆ.ಎನ್.ಎನ್.ಸಿ.ಇ: ‘ಯುಗ್ಮಾ ಟೆಕ್‌ಫೆಸ್ಟ್-2.0’ ಎಐ ಹ್ಯಾಕಥಾನ್ ಉದ್ಘಾಟನೆ

Published: 24 ಜುಲೈ 2026, 2:25 ಅಪರಾಹ್ನ • 1 min read

JNNCE ಶಿವಮೊಗ್ಗ: ಯುವ ತಂತ್ರಜ್ಞರು ಸಮಾಜದ ನೈಜ ಸಮಸ್ಯೆಗಳನ್ನು ಗುರುತಿಸಿ, ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸುವಂತಹ ನಾವೀನ್ಯ ಎಐ ಆಧಾರಿತ ಪರಿಹಾರಗಳನ್ನು ರೂಪಿಸಿ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯರೂ ಆದ ಉದ್ಯಮಿ ಎಸ್. ರುದ್ರೇಗೌಡ ಕರೆ ನೀಡಿದರು‌‌

ನಗರದ ಜೆ.ಎನ್.ಎನ್ ಇಂಜಿನಿಯರಿಂಗ್‌ ಕಾಲೇಜಿನ ಇನ್ಫಾರ್ಮೇಷನ್ ಸೈನ್ಸ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ‘ಯುಗ್ಮಾ ಟೆಕ್‌ಫೆಸ್ಟ್-2.0 ಮೇದದೃಷ್ಟಿ’ ರಾಷ್ಟ್ರಮಟ್ಟದ ಎಐ ಹ್ಯಾಕಥಾನ್ ಉದ್ಘಾಟಿಸಿ ಮಾತನಾಡಿದರು.

ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭವಿಷ್ಯದ ನವೋದ್ಯಮಿಗಳಾಗಿ, ತಂತ್ರಜ್ಞಾನ ನಾಯಕರಾಗಿ ಬದಲಾಗಬೇಕು. ಅಂತಹ ಬದಲಾವಣೆಗೆ ಹ್ಯಾಕಥಾನ್ ಅದ್ಭುತ ವೇದಿಕೆ. ಭಾರತವು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಅತ್ಯಂತ ಗಮನಾರ್ಹ ಸಾಧನೆಯನ್ನು ಮಾಡಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. 1970ರ ದಶಕದ ಮಧ್ಯಭಾಗದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನ ಆರಂಭವಾದ ದಿನಗಳಿಂದ ಹಿಡಿದು ಇಂದಿನ ಕೃತಕ ಬುದ್ಧಿಮತ್ತೆ ಯುಗದವರೆಗೆ ನಮ್ಮ ದೇಶವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಇಂದು ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಪ್ರತಿಭಾವಂತ ಸಾಫ್ಟ್‌ವೇರ್‌ ವೃತ್ತಿಪರರ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ನಿಮ್ಮಂತಹ ಯುವ ನವೋದ್ಯಮಿಗಳಿಗೆ ಅಪಾರ ಅವಕಾಶಗಳು ತೆರೆದುಕೊಳ್ಳುತ್ತಿವೆ.

ಜಗತ್ತಿನ ಅತಿದೊಡ್ಡ ಗ್ರಾಹಕ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದೆ. ನಮ್ಮ ದೇಶದಲ್ಲಿಯೇ ಅಪಾರ ಅವಕಾಶಗಳಿವೆ. ಆದ್ದರಿಂದ ನಿಮ್ಮ ಜ್ಞಾನ, ಕೌಶಲ್ಯ ಮತ್ತು ಸೃಜನಶೀಲತೆಯನ್ನು ಭಾರತದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಿಕೊಳ್ಳಿ. ನಿಮ್ಮಲ್ಲಿ ಹಲವರಿಗೆ ವಿದೇಶಗಳಲ್ಲಿ ಕೆಲಸ ಮಾಡುವ ಅವಕಾಶಗಳು ದೊರೆಯಬಹುದು. ಆದರೆ ನಿಮ್ಮ ಪ್ರತಿಭೆಯಿಂದ ನಮ್ಮ ದೇಶದಲ್ಲಿಯೇ ಮಹತ್ತರ ಬದಲಾವಣೆಗಳನ್ನು ತರಲು ಸಾಧ್ಯ ಎಂಬುದನ್ನು ಎಂದಿಗೂ ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಯುಗ್ಮಾ ಎಂಬ ಶೀರ್ಷಿಕೆಯು ಕೂಡುವಿಕೆಯ ಸಂಕೇತವಾಗಿದೆ. ಪ್ರಾಯೋಗಿಕ ಜ್ಞಾನ ನೀಡುವಂತಹ ಸಾಧಕರ ಒಡನಾಟದಿಂದ ನಮ್ಮಲ್ಲಿ ಮತ್ತಷ್ಟು ಜ್ಞಾನ ವಿಕಸನಗೊಳ್ಳಲಿದೆ. ಎಐ ಎಲ್ಲಾ ರಂಗದಲ್ಲಿ ಅಳವಡಿಸಿಕೊಳ್ಳಲಾಗಿದೆ ಮತ್ತು ಪರಿಣಾಮಕಾರಿ ಫಲಿತಾಂಶ ಪಡೆಯಲಾಗುತ್ತಿದೆ. ಅದರೇ ಎಐ ಮನುಷ್ಯನಿಗೆ ಭಸ್ಮಾಸುರನಂತೆ ಕಾಡದಿರಲಿ. ಆವಿಷ್ಕಾರಗಳು ಬದುಕಿಗೆ ಪೂರಕವಾಗಿರಬೇಕು.

ಈ ನೆಲದ ಋಣ ತೀರಿಸುವತ್ತ ಯುವಸಮೂಹ ಗಮನಹರಿಸಬೇಕಿದೆ. ಪರ ಊರುಗಳಿಗೆ ಅವಕಾಶಗಳಿಗಾಗಿ ಹಾರದೆ, ಸುತ್ತಲಿನ ವಾತಾವರಣ ಬಳಸಿಕೊಂಡು ನಮ್ಮ ಊರಿನಲ್ಲಿಯೇ ಆವಿಷ್ಕಾರಿ ಬದಲಾವಣೆಗಳನ್ನು ನಿರ್ಮಿಸುವ ಕಾರ್ಯವಾಗಬೇಕಿದೆ. ಈ ಹಿನ್ನಲೆಯಲ್ಲಿ ಎಐ ನಂತಹ ತಂತ್ರಜ್ಞಾನಗಳ ಮೂಲಕ ಮತ್ತಷ್ಟು ಯೋಜನೆಗಳು ಅರಳಲಿ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹ್ಯಾಕಥಾನ್ ಎನ್ನುವುದು ಕೇವಲ ಒಂದು ಸ್ಪರ್ಧೆಯಲ್ಲ. ಅದು ತರಗತಿಯಲ್ಲಿ ಕಲಿತ ಜ್ಞಾನವನ್ನು ನೈಜ ಜೀವನದ ಸಮಸ್ಯೆಗಳಿಗೆ ಅನ್ವಯಿಸುವ ಸೇತುವೆಯಾಗಿದೆ. ತರಗತಿ ನಿಮಗೆ ಏನು ತಿಳಿಯಬೇಕು ಎಂಬುದನ್ನು ಕಲಿಸಿದರೆ, ಹ್ಯಾಕಥಾನ್ ತಿಳಿದಿರುವ ಜ್ಞಾನವನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸಬೇಕು? ಎಂಬ ಮಹತ್ವದ ಪ್ರಶ್ನೆಗೆ ಉತ್ತರ ಹುಡುಕುವ ಅವಕಾಶವನ್ನು ನೀಡುತ್ತದೆ. ನಿಜವಾದ ಕಲಿಕೆ ಅಲ್ಲಿಂದಲೇ ಆರಂಭವಾಗುತ್ತದೆ.

ನೀವು ರೂಪಿಸುವ ಪ್ರತಿಯೊಂದು ಯೋಜನೆಯಲ್ಲಿಯೂ ವಿಸ್ತರಣಾ ಸಾಮರ್ಥ್ಯ, ಸಂಪನ್ಮೂಲ ಹಾಗೂ ಇಂಧನ ದಕ್ಷತೆ, ಸಾಮಾಜಿಕ ಪರಿಣಾಮ ಹೊಂದಿರಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ. ಸುಸ್ಥಿರ ಅಭಿವೃದ್ಧಿ ಇಂದು ಜಗತ್ತಿನ ಪ್ರಮುಖ ಸವಾಲಾಗಿದೆ. ಎಐ ಅಪಾರ ಅವಕಾಶಗಳನ್ನು ನೀಡಿದರೂ, ಹೆಚ್ಚಿನ ಗಣಕ ಶಕ್ತಿ ಮತ್ತು ವಿದ್ಯುತ್ ಬಳಕೆಯಿಂದ ಕಾರ್ಬನ್ ಹೆಜ್ಜೆಗುರುತನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಭವಿಷ್ಯದ ಎಂಜಿನಿಯರ್‌ಗಳಾದ ನೀವು ಬುದ್ಧಿವಂತಿಕೆಯ ಜೊತೆಗೆ ಪರಿಸರ ಸ್ನೇಹಿ ಹಾಗೂ ಸಾಮಾಜಿಕ ಜವಾಬ್ದಾರಿಯುತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಇನ್ಫಾರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಆರ್.ಜೆ, ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಂಯೋಜಕರಾದ ವಿರೇಶ್.ಎಚ್.ಟಿ ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಸದಸ್ಯರಾದ ಡಾ. ಪವನ್ ಕುಮಾರ್ ಎಂ.ಪಿ ಸ್ವಾಗತಿಸಿದರು. ವಿವಿಧ ರಾಜ್ಯಗಳ 150 ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು. 

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Ganesh Ajjimane

Senior Journalist | Malenadu Today
✓ Verified Journalist

Authority

Published by: Malenadu Today Editorial Desk
✓ Fact Checked   ✓ Updated   Editorial Policy