ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ:ಖಾಸಗಿ ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ನಂಬಿಸಿ, ಶಿವಮೊಗ್ಗದ ವೃದ್ಧರೊಬ್ಬರಿಗೆ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ವರದಿಯಾಗಿದೆ.
ಘಟನೆಯ ವಿವರ
ದೂರುದಾರರು ಮೊಬೈಲ್ ನೋಡುತ್ತಿದ್ದಾಗ ಅವರಿಗೆ ಒಂದು ಮೆಸೇಜ್ ಬಂದಿದೆ. ಅದನ್ನು ಪರಿಶೀಲಿಸಿದಾಗ, ವಂಚಕರು ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡುವ ಗ್ರೂಪ್ ಒಂದಿದೆ, ಅದಕ್ಕೆ ಜಾಯಿನ್ ಆಗಿ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ವೃದ್ಧರು ಆ ಗ್ರೂಪ್‌ಗೆ ಜಾಯಿನ್ ಆಗಿದ್ದಾರೆ.ನಂತರ ವಂಚಕರು, ನಮ್ಮದೊಂದು ಖಾಸಗಿ ಕಂಪನಿಯಿದ್ದು, ಅದರಲ್ಲಿ ಹೂಡಿಕೆ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ಅಷ್ಟೇ ಅಲ್ಲದೆ, ಇತರ ಗ್ರಾಹಕರು ಲಾಭ ಪಡೆದಿರುವುದಾಗಿ ಫೇಕ್ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿ ವೃದ್ಧರನ್ನು ಪುಸಲಾಯಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ವೃದ್ಧರು, ಹೆಚ್ಚಿನ ಲಾಭದ ಆಸೆಯಿಂದ ಹಂತ ಹಂತವಾಗಿ ಒಟ್ಟು 32,35,000 ಹಣವನ್ನು ಹೂಡಿಕೆ ಮಾಡಿದ್ದಾರೆ.
ಕೆಲ ದಿನಗಳ ನಂತರ ವೃದ್ಧರು ತಮ್ಮ ಲಾಭಾಂಶವನ್ನು ವಾಪಸ್ ನೀಡುವಂತೆ ಕೇಳಿದಾಗ, ವಂಚಕರು ನಿಮ್ಮ ಲಾಭಾಂಶ ಶೇಕಡಾ 200 ಕ್ಕಿಂತ ಹೆಚ್ಚಾಗಿದೆ. ಆ ಹಣವನ್ನು ಪಡೆಯಬೇಕಾದರೆ ಮೊದಲು ಶೇಕಡಾ 20 ರಷ್ಟು ತೆರಿಗೆ ಪಾವತಿಸಬೇಕು ಎಂದು ಹೊಸ ಕಥೆ ಹೇಳಿದ್ದಾರೆ.ಇದರಿಂದ ಅನುಮಾನಗೊಂಡ ವೃದ್ಧರು ಗೂಗಲ್‌ನಲ್ಲಿ ಹುಡುಕಾಡಿದಾಗ, ಇದೊಂದು ವಂಚಕರ ಜಾಲ ಎಂಬುದು ಬೆಳಕಿಗೆ ಬಂದಿದೆ. ತಾವು ಮೋಸ ಹೋಗಿರುವುದನ್ನು ಅರಿತ ಅವರು, ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸುವಂತೆ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
