ಶಿವಮೊಗ್ಗ : ಅಡಿಕೆ ಸೀಜನ್ ಟೈಮ್ ಈ ಟೈಮ್ನಲ್ಲಿ ರೈತರು ಅಡಿಕೆಯನ್ನು ಕೊಯ್ದು ಅದನ್ನು ಸಂಸ್ಕರಣೆ ಮಾಡಿ ಗೋಣಿ ಚೀಲಕ್ಕೆ ತುಂಬಿ ಇಡುತ್ತಾರೆ. ಅದನ್ನು ಇಡುವಾಗ ಸ್ವಲ್ಪ ಮೈ ಮರೆತರೂ ಸಹ ಕಳ್ಳ ಕಾಕರು ಹೊಂಚು ಹಾಕಿ ಅಡಿಕೆಯನ್ನು ಕದ್ದೊಯ್ಯುವುದು ಪಕ್ಕ. ಅದರಂತೆ ಹನುಮಂತಪುರ ಗ್ರಾಮದಲ್ಲಿ ಅಡಿಕೆ ಕಳ್ಳತನ ಪ್ರಕರಣವೊಂದು ನಡೆದಿದ್ದು, ಮನೆಯಂಗಳದಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಚೀಲಗಳನ್ನು ಕಳ್ಳರು ಎಗರಿಸಿದ್ದಾರೆ.
ಹನುಮಂತಪುರ ಗ್ರಾಮದ ನಿವಾಸಿಯೊಬ್ಬರು ತಮ್ಮ ತೋಟದ ಅಡಿಕೆಯನ್ನು ಕಟಾವು ಮಾಡಿ, ಸಂಸ್ಕರಣೆ ಮುಗಿಸಿ ಗೋಣಿ ಚೀಲಗಳಲ್ಲಿ ಕಟ್ಟಿ ಮನೆಯ ಮುಂಭಾಗದಲ್ಲಿ ಇಟ್ಟಿದ್ದರು. ಜನವರಿ 17ರಂದು ರಾತ್ರಿ 11 ಗಂಟೆಯ ಸುಮಾರಿಗೆ ಚೀಲಗಳು ಮನೆಯ ಮುಂದೆಯೇ ಇದ್ದವು. ಆದರೆ ಮಾರನೆ ದಿನ ಅಂದರೆ ಜನವರಿ 18 ರ ಬೆಳಿಗ್ಗೆ ಎದ್ದು ನೋಡಿದಾಗ, ಅಂಗಳದಲ್ಲಿದ್ದ ಒಣ ಅಡಿಕೆಯ ನಾಲ್ಕು ಗೋಣಿ ಚೀಲಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳತನವಾದ ಈ ನಾಲ್ಕು ಚೀಲಗಳಲ್ಲಿ ಸುಮಾರು 2,00,000 ಮೌಲ್ಯದ 3 ಕ್ವಿಂಟಾಲ್ ಒಣ ಅಡಿಕೆಯಿತ್ತು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Areca Nut Theft in Hanumanthapura village
