ಶಿವಮೊಗ್ಗದ ತುಂಬೆಲ್ಲಾ ತಗ್ಗಿನಲ್ಲಿ ಹಾರುವ ವಿಮಾನ! ಮುಚ್ಚಿಡುತ್ತಿರುವ ಸತ್ಯಗಳೇನು?

ಇತ್ತೀಚೆಗೆ ಮಲೆನಾಡಿನ ವಸತಿ ಪ್ರದೇಶಗಳ ಮೇಲೆ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರುವ ವಿಮಾನಗಳು ಸಾರ್ವಜನಿಕರಲ್ಲಿ ಅಚ್ಚರಿಯ ಜೊತೆಗೆ ಆತಂಕವನ್ನೂ ಸೃಷ್ಟಿಸುತ್ತಿವೆ.

ಇದು ಕೇವಲ ಸಾಮಾನ್ಯ ಹಾರಾಟವಲ್ಲ, ಬದಲಾಗಿ ‘ವೈಮಾನಿಕ ಭೂಭೌತ ಸಮೀಕ್ಷೆ’ (Aerial Geophysical Survey), ಭೂಗರ್ಭದಲ್ಲಿ ಅಡಗಿರುವ ಚಿನ್ನ, ಕಬ್ಬಿಣ, ತಾಮ್ರದಂತಹ ಬೆಲೆಬಾಳುವ ಖನಿಜಗಳನ್ನು ಪತ್ತೆ ಹಚ್ಚಲು ಮ್ಯಾಗ್ನೆಟೋಮೀಟರ್, ಸ್ಪೆಕ್ಟೋಮೀಟರ್‌ಗಳಂತಹ ಅತ್ಯಾಧುನಿಕ ಉಪಕರಣಗಳನ್ನು ಹೊತ್ತ ಈ ವಿಮಾನಗಳು ಭೂಮಿಯನ್ನು ಸ್ಕ್ಯಾನ್ ಮಾಡುತ್ತವೆ.

ತಂತ್ರಜ್ಞಾನದ ದೃಷ್ಟಿಯಿಂದ ಇದು ಆದ್ಭುತವೆನಿಸಿದರೂ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಇಂತಹ ಪ್ರಕ್ರಿಯೆಗಳನ್ನು ಕೇವಲ ಕೌತುಕದಿಂದ ನೋಡದೆ, ವಿಮರ್ಶನಾತ್ಮಕವಾಗಿ ವಿಶ್ಲೇಷಿಸುವುದು ಇಂದಿನ ತುರ್ತು ಆಗತ್ಯವಾಗಿದೆ.

ತಗ್ಗಿನಲ್ಲಿ ಹಾರುವ ವಿಮಾನ / ಪಾರದರ್ಶಕತೆಯ ಕೊರತೆ ಮತ್ತು ಆತಂಕ

ಹಿಂದೆ ಭೌತಿಕವಾಗಿ ಕಾಡು-ಮೇಡು ಅಲೆದು ಮಾಡುತ್ತಿದ್ದ ಶೋಧಕಾರ್ಯ ಈಗ ಕೆಲವೇ ಗಂಟೆಗಳಲ್ಲಿ ಮುಗಿಯುವುದು ವೈಜ್ಞಾನಿಕ ಸಾಧನೆಯೇ ಸರಿ. ಆದರೆ, ಜನವಸತಿ ಪ್ರದೇಶಗಳ ಮೇಲೆ ಯಾವುದೇ ಪೂರ್ವಸೂಚನೆ
ಅಥವಾ ಮಾಹಿತಿ ಇಲ್ಲದೆ ಇಂತಹ ಸಮೀಕ್ಷೆಗಳನ್ನು ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಸರಿ? ಹಠಾತ್ತನೆ ತಗ್ಗಿನಲ್ಲಿ ಹಾರುವ ವಿಮಾನಗಳು ಜನರಲ್ಲಿ ಭೀತಿ ಮೂಡಿಸುವುದಲ್ಲದೆ, ಖಾಸಗಿತನದ ಉಲ್ಲಂಘನೆಯ ಪ್ರಶ್ನೆಗಳನ್ನೂ ಸಹ ಮೂಡಿಸುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಸ್ಥಳೀಯರಿಗೆ ಮುಂಚಿತವಾಗಿ ಈ ಬಗ್ಗೆ ಅರಿವು ಮೂಡಿಸದಿರುವುದು ಆಡಳಿತಾತ್ಮಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.

ಗಣಿಗಾರಿಕೆ ಮತ್ತು ಪರಿಸರ ನಾಶದ ಭೀತಿ

ಅತ್ಯಂತ ಗಂಭೀರವಾದ ವಿಚಾರವೆಂದರೆ, ಈ ಅನ್ವೇಷಣೆಯ ನಂತರದ ವಿನಾಶಕಾರಿ ಪರಿಣಾಮಗಳು, ಈ ಸ್ಕ್ಯಾನಿಂಗ್ ಮೂಲಕ ಖನಿಜ ನಿಕ್ಷೇಪಗಳು ಪತ್ತೆಯಾದರೆ, ಅದರ ಮುಂದಿನ ತಾರ್ಕಿಕ ಹೆಜ್ಜೆ ‘ಗಣಿಗಾರಿಕೆ’. ಕೇವಲ *ಆರ್ಥಿಕ ಅಭಿವೃದ್ಧಿ’ಯ ಸೋಗಿನಲ್ಲಿ ನಡೆಯುವ ಮಿತಿಮೀರಿದ ಗಣಿಗಾರಿಕೆಯಿಂದಾಗಿ ನಮ್ಮ ಸೂಕ್ಷ್ಮ ಪರಿಸರ, ಅಪಾರ ಅರಣ್ಯ ಸಂಪತ್ತು ಮತ್ತು ಜೀವವೈವಿಧ್ಯತೆ ನಾಶವಾಗುತ್ತದೆ.

ಗಣಿಗಾರಿಕೆಯೆಂಬುದು ಸ್ಥಳೀಯ ಜನರ ಒಕ್ಕಲೆಬ್ಬಿಸುವಿಕೆ. ಅಂತರ್ಜಲ ಬರಿದಾಗುವಿಕೆ. ಮತ್ತು ಮಾರಕ ಮಾಲಿನ್ಯದಂತಹ ಗಂಭೀರ ಸಾಮಾಜಿಕ-ಪರಿಸರ ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ. ಬೃಹತ್ ಕಾರ್ಪೊರೇಟ್ ಕಂಪನಿಗಳ ಪಾಲಿಗೆ ಈ ಖನಿಜಗಳು ವರದಾನವಾಗಬಹುದೇ ಹೊರತು. ಇದರಿಂದ ತಮ್ಮ ನೆಲೆ ಕಳೆದುಕೊಳ್ಳುವ ಜನಸಾಮಾನ್ಯರಿಗಲ್ಲ.

ನೈಸರ್ಗಿಕ ಸಂಪನ್ಮೂಲಗಳನ್ನು ದೇಶದ ಆರ್ಥಿಕತೆಗೆ ಬಳಸಿಕೊಳ್ಳುವುದು ತಪ್ಪಲ್ಲ. ಆದರೆ, ಲಾಭದಾಸೆಗೆ ಭೂಮಿಯ ಒಡಲನ್ನು ನಿರಂತರವಾಗಿ ಬಗೆಯುತ್ತಾ ಹೋದರೆ ಭವಿಷ್ಯದ ಗತಿಯೇನು? ತಂತ್ರಜ್ಞಾನದ ಮೂಲಕ ನೆಲದೊಳಗಿನ ಸಂಪತ್ತನ್ನು ಪತ್ತೆ ಹಚ್ಚುವ ಈ ಆಧುನಿಕ ವಿಜ್ಞಾನವು, ಪ್ರಕೃತಿಯ ನಾಶಕ್ಕೆ ದಾರಿಮಾಡಿಕೊಡುವ ಅಸ್ತ್ರವಾಗಬಾರದು.

ಖನಿಜಾನ್ವೇಷಣೆಯು ಕೇವಲ ಲಾಭದಾಯಕ ಶೋಧನೆಯಾಗದೆ. ‘ಸುಸ್ಥಿರ ಅಭಿವೃದ್ಧಿಯ’ (Sustainable Development) ಕಟ್ಟುನಿಟ್ಟಾದ ಚೌಕಟ್ಟಿನಲ್ಲಿ ನಡೆಯಬೇಕು. ಭೂಮಿಯನ್ನು ಕೇವಲ ‘ಬಳಕೆಯ ವಸ್ತು’
ಅಥವಾ ‘ಸಂಪನ್ಮೂಲ’ ಎಂದು ನೋಡುವ ಬಂಡವಾಳಶಾಹಿ ದೃಷ್ಟಿಕೋನದ ಬದಲು. ಅದನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸಬೇಕಾದ ‘ಜೀವಸಂಕುಲದ ಆವಾಸಸ್ಥಾನ’ವಾಗಿ ನೋಡುವ ವಿವೇಕವನ್ನು ನಾವು ಬೆಳೆಸಿಕೊಳ್ಳಬೇಕಿದೆ.

బರಹ : ರಫಿ ರಿಪ್ಪನ್ ಪೇಟೆ
ಶಿವಮೊಗ್ಗದ ತುಂಬೆಲ್ಲಾ ತಗ್ಗಿನಲ್ಲಿ ಹಾರುವ ವಿಮಾನ! ಮುಚ್ಚಿಡುತ್ತಿರುವ ಸತ್ಯಗಳೇನು? Aerial Geophysical Survey in Malenadu Residential Areas Raises Concerns Over Mining and Environmental Destruction.
Aerial Geophysical Survey in Malenadu Residential Areas Raises Concerns Over Mining and Environmental Destruction.ಶಿವಮೊಗ್ಗದ ತುಂಬೆಲ್ಲಾ ತಗ್ಗಿನಲ್ಲಿ ಹಾರುವ ವಿಮಾನ! ಮುಚ್ಚಿಡುತ್ತಿರುವ ಸತ್ಯಗಳೇನು?

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw