ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ನಿಗದಿತ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನ.17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟ ಹಗಲು-ರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ತಿಪ್ಪೇಸ್ವಾಮಿ ಅಣಬೇರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ದಿನಕ್ಕೆ ಎರಡು ಗಂಟೆಗಳ ಕೆಲಸಕ್ಕಾಗಿ ನೇಮಕಗೊಂಡ ಆಶಾ ಕಾರ್ಯಕರ್ತೆಯರು ಈಗ ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಮತ್ತು ಶಿಶು ಮರಣ ತಡೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸೇರಿದಂತೆ ಆರೋಗ್ಯ ಇಲಾಖೆಯ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ ಸಮರ್ಪಕ ಗೌರವಧನ ದೊರೆಯುತ್ತಿಲ್ಲ ಎಂದರು.
2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ನಾಲ್ಕು ದಿನಗಳ ಹೋರಾಟದ ವೇಳೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆರನೇ ಗ್ಯಾರಂಟಿ ಜಾರಿಗೊಳಿಸುವ ಭರವಸೆ ನೀಡಿದ್ದರು. ಆದರೆ ಈಡೇರಿಸಿಲ್ಲ. ಪ್ರಸ್ತುತ 5 ಸಾವಿರ ನಿಗದಿತ ಗೌರವಧನ ಹಾಗೂ 2 ಸಾವಿರ ಎಂಸಿಟಿಎಸ್ ಮೊತ್ತ ಸೇರಿ ಒಟ್ಟು 7 ಸಾವಿರ ಮಾತ್ರ ದೊರೆಯುತ್ತಿದೆ. ಉಳಿದ ಪ್ರೋತ್ಸಾಹಧನ ಪಾವತಿಯೂ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರ ಕನಿಷ್ಠ ವೇತನ 19 ಸಾವಿರವಾಗಿದ್ದರೂ ಆಶಾ ಕಾರ್ಯಕರ್ತೆಯರು 15 ಸಾವಿರ ಗೌರವಧನಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದನ್ನಾದರೂ ಸರ್ಕಾರ ಜಾರಿಗೊಳಿಸಬೇಕು. ನಿವೃತ್ತ ಕಾರ್ಯಕರ್ತೆಯರಿಗೆ 5 ಲಕ್ಷ ಇಡಿಗಂಟು ನೀಡಬೇಕು. ಸುಗಮಕಾರರನ್ನು ಮರುನೇಮಕ ಮಾಡಿಕೊಳ್ಳಬೇಕು. ಆರೋಗ್ಯ ಭದ್ರತೆ ಒದಗಿಸಬೇಕು ಹಾಗೂ ಕೇಂದ್ರ ಘೋಷಿಸಿರುವ ₹1,500 ಹೆಚ್ಚುವರಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
