ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಅನೇಕರು ಟ್ರಾಫಿಕ್ ನಿಯಮಗಳನ್ನು ಪಾಲಿಸುವಲ್ಲಿ ಉದಾಸೀನತೆ ತೋರುತ್ತಿದ್ದಾರೆ. ಕೆಲ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ನಿಯಮ ಉಲ್ಲಂಘಿಸಿದರೆ, ಕಾರು ಚಾಲಕರು ಸೀಟ್ ಬೆಲ್ಟ್ ಹಾಕುವುದನ್ನು ಮರೆತು ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಇದರ ನಡುವೆ, ಇತ್ತೀಚೆಗೆ ನಗರದಲ್ಲಿ ಅಪ್ರಾಪ್ತ ಯುವಕರಿಗೆ ವಾಹನ ಚಲಾವಣೆಗೆ ಅವಕಾಶ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ ಬರೋಬ್ಬರಿ ದಂಡ ವಿಧಿಸುವ ಮೂಲಕ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಅದರಂತೆ, ಶಿವಮೊಗ್ಗದಲ್ಲಿ ಅಪ್ರಾಪ್ತ ಯುವಕನಿಗೆ ಬೈಕ್ ನೀಡಿದ ಸಲುವಾಗಿ ವಾಹನದ ಮಾಲೀಕರಿಗೆ ಬರೋಬ್ಬರಿ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ದಿನಾಂಕ 06-11-2026 ರಂದು ಪಿಎಸ್ಐ ನಾಗರಾಜ್ ಹೆಚ್.ಎನ್. ಅವರು ಸಿಬ್ಬಂದಿಯೊಂದಿಗೆ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಂಪುನಗರದಲ್ಲಿ ಸಂಚಾರ ನಿಯಂತ್ರಣ ಹಾಗೂ ವಾಹನ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ನ ಮಾಲೀಕರು ಚಾಲನಾ ಪರವಾನಗಿ ಇಲ್ಲದ ಅಪ್ರಾಪ್ತ ವಯಸ್ಕನಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ವಾಹನದ ಮಾಲೀಕರ ವಿರುದ್ಧ ಐಎಂವಿ ಆಕ್ಟ್ ಕಲಂ 199(A) ಅಡಿಯಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶಿಟ್ ಸಲ್ಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ದಿನಾಂಕ 12-11-2026 ರಂದು ವಾಹನದ ಮಾಲೀಕರಿಗೆ 25,000 ದಂಡ ವಿಧಿಸಿ ಆದೇಶಿಸಿದೆ.
