ಶಿವಮೊಗ್ಗ : ಬಿಜೆಪಿಗರು ನಿಜವಾದ ದೇಶಭಕ್ತರಾಗಿದ್ದರೆ ಗೋಡ್ಸೆಯನ್ನು ಭಯೋತ್ಪಾದಕ ಎಂದು ಘೊಷಿಸಲಿ: ಬಿಕೆ ಹರಿಪ್ರಸಾದ್​​

ಹಂಚಿಕೊಳ್ಳಿ
WhatsApp Facebook X Telegram
BK Hariprasad Challenges BJP Over Godse Terrorist
BK Hariprasad Challenges BJP Over Godse Terrorist

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ /ಮಹಾತ್ಮಗಾಂಧೀಜಿಯನ್ನು ಹತ್ಯೆ ಮಾಡಿದ ನಾಥರಾಮ್ ಗೋಡೆಯನ್ನು ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂದು ಘೋಷಿಸುವ ಧೈರ್ಯ ಬಿಜೆಪಿಗಿದೆಯೇ? ದೇಶಭಕ್ತಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ನಿಜವಾದ ನಂಬಿಕೆ ಇದ್ದರೆ ಬಿಜೆಪಿ ಈ ಘೋಷಣೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸವಾಲು ಹಾಕಿದರು. 

ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಹೆಸರನ್ನು ಅಳಿಸಿಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಗಾಂಧೀಜಿಯವರ ವಿಚಾರಧಾರೆಗಳ ಬಗ್ಗೆ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಸ್ಟಿಂಗ್ ಆಪರೇಷನ್ ನಡೆಸಲು ಯಾವುದೇ ಪ್ರತ್ಯೇಕ ಸೆಲ್‌ಗಳಿಲ್ಲ. ಇಂತಹ ಚಟುವಟಿಕೆಗಳಲ್ಲಿ ಪಕ್ಷದ ಯಾರಾದರೂ ಭಾಗಿಯಾಗಿರುವುದು ಸಾಕ್ಷಾಧಾರಗಳೊಂದಿಗೆ ಸಾಬೀತಾದರೆ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು.

 ಪಕ್ಷದ ಕೆಲವರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟವರಿಗೆ ಶೋಕಾಸ್ ನೋಟಿಸ್‌ ನೀಡುವಂತೆ ಸೂಚಿಸಲಾಗಿದೆ. ಸಂಪುಟ ಸಭೆಯಲ್ಲಿ ನಡೆದಿರುವ ಚರ್ಚೆಗಳ ಬಗ್ಗೆ ತಮಗೆ ಮಾಹಿತಿ ಇಲ್ಲ. ಆರೋಪಗಳ ಕುರಿತು ತನಿಖೆ ನಡೆದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ಸ್ಥಳಗಳನ್ನು ಗುರುತಿಸಿ, ಅವರ ನೆನಪುಗಳನ್ನು ಉಳಿಸುವ ಕೆಲಸವಾಗಬೇಕು. ಇದಕ್ಕಾಗಿ ವಿಧಾನ ಪರಿಷತ್ ಸದಸ್ಯರ ನಿಧಿ ಸೇರಿದಂತೆ ಅಗತ್ಯ ನೆರವು ಒದಗಿಸುವ ಕುರಿತು ಚಿಂತಿಸಲಾಗುವುದು ಎಂದು ಹೇಳಿದರು.

 ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ನಡೆದ ರೈತ ಹೋರಾಟಗಳು, ಕಾಗೋಡು ಚಳವಳಿ ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಮುಂಬರುವ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ವೋಟ್ ಜೋರ್, ದೇಶ್ ಚೋರ್ ಅಭಿಯಾನದ ಮೂಲಕ ಮತದಾನದ ಹಕ್ಕಿನ ರಕ್ಷಣೆ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಿಗಮ ಮಂಡಳಿಗಳಲ್ಲಿ ಈಗಿರುವ ಹಳೆಯ ಪದಾಧಿಕಾರಿಗಳ ಬದಲಿಗೆ ಹೊಸಬರಿಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆ ಒಂದು ವಾರದೊಳಗೆ ನಡೆಯಲಿದೆ ಎಂದು ಹರಿಪ್ರಸಾದ್ ಹೇಳಿದರು. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor