
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಆನೆ ಅಲ್ಲೋಲಕಲ್ಲೋಲ ಸೃಷ್ಟಿಸಿತು, ಕಿರಿದಾದ ರಸ್ತೆಯಲ್ಲಿ ಸಾಗಿ, ಅಂಬಾರಿಯನ್ನು ಮರದ ಕೊಂಬೆಗಳಿಗೆ ತಗುಲಿಸುತ್ತಾ, ಮಾವುತನ ಮಾತನ್ನು ಲೆಕ್ಕಿಸದೆ ಮುನ್ನುಗ್ಗಿತು. ಕಾರನ್ನು ಎತ್ತಿ ಪುಡಿ ಮಾಡಿತು. ಇಂತಹ ದೃಶ್ಯಗಳು ನಿನ್ನೆ ಶಿವಮೊಗ್ಗ ನಗರದಲ್ಲಿ ಸರ್ವೆಸಾಮಾನ್ಯವಾಗಿದ್ದವು. ಆದರೆ ಇಲ್ಲೊಂದು ದೃಶ್ಯದಲ್ಲಿ ಅಜ್ಜಿಯೊಬ್ಬರು ಆನೆಯಿಂದ ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಹೌದು, ನಿನ್ನೆ ಶಿವಮೊಗ್ಗದಲ್ಲಿ ಚಾಮುಂಡೇಶ್ವರಿ ಮೂರ್ತಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಕೆಲ ಸಮಯದ ನಂತರ ಗಾಬರಿಗೊಂಡು ರಸ್ತೆಯಲ್ಲಿ ಓಡಲು ಆರಂಭಿಸಿತು. ಮಾವುತನ ಮಾತನ್ನು ಕೇಳದೆ, ಕಿರಿದಾದ ಹಾಗೂ ದೊಡ್ಡದಾದ ರಸ್ತೆಗಳಲ್ಲಿ ಎಲ್ಲೆಡೆಯೂ ಆನೆ ತನ್ನಿಷ್ಟದಂತೆ ನಡೆದುಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಗೇಟ್ ತೆರೆದು ರಸ್ತೆ ಬಳಿ ನಿಂತಿದ್ದ ಅಜ್ಜಿಯೊಬ್ಬರು ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದು, ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.



ಸಿಸಿಟಿವಿ ದೃಶ್ಯದಲ್ಲಿರುವಂತೆ, ಆನೆ ಬರುವ ಸದ್ದನ್ನು ಕೇಳಿದ ಅಜ್ಜಿ ಗೇಟ್ ತೆಗೆದು ಏನೆಂದು ನೋಡಲು ಹೊರಬಂದಿದ್ದಾರೆ. ಈ ವೇಳೆ ಅವರ ಬಳಿಯೇ ಆನೆ ವೇಗವಾಗಿ ಬಂದಿದೆ. ಆನೆಯ ವೇಗವನ್ನು ನೋಡಿ ಅಪಾಯವನ್ನು ಅರಿತ ಅಜ್ಜಿ, ಕೂಡಲೇ ಒಳಗೆ ಬಂದು ಗೇಟ್ ಬಾಗಿಲನ್ನು ಹಾಕಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹತ್ತಿರವೇ ಬಂದ ಆನೆ ಮನೆಯ ಎದುರುಗಡೆ ಇದ್ದ ಕಾರನ್ನು ತನ್ನ ಸೊಂಡಿಲಿನಿಂದ ಎತ್ತಿ ಜಖಂಗೊಳಿಸಿದೆ. ಆ ಸಂದರ್ಭದಲ್ಲಿ ಆನೆಯ ಆಕ್ರೋಶವು ಕಂಡಿದ್ದನ್ನೆಲ್ಲಾ ಪುಡಿಮಾಡಿಬಿಡುತ್ತೇನೆ ಎಂಬಂತಿತ್ತು.
ಕಾರನ್ನು ಜಖಂಗೊಳಿಸಿ ಸೈಡ್ ಲುಕ್ನಲ್ಲಿ ಆನೆ ಅಜ್ಜಿಯನ್ನೊಮ್ಮೆ ನೋಡಿದೆ. ಈ ಸಂದರ್ಭದಲ್ಲಿ ಅಜ್ಜಿ ಆನೆಯನ್ನು ನೋಡಿ ಕೈಮುಗಿದಿದ್ದಾರೆ. ಅದೃಷ್ಟವಶಾತ್ ಆನೆ ಅಜ್ಜಿ ಸೇರಿದಂತೆ ಅಲ್ಲಿದ್ದ ಯಾವುದೇ ಜನರ ಮೇಲೆ ದಾಳಿ ನಡೆಸದೆ, ಕೇವಲ ವಾಹನದ ಮೇಲಷ್ಟೇ ತನ್ನ ಪ್ರತಾಪ ತೋರಿಸಿ ಮುಂದೆ ತೆರಳಿದೆ.


