ಶಿವಮೊಗ್ಗ : ತಾಯಿ ಕೈ ಕಳೆದುಕೊಳ್ಳುವ ಮೂಲಕ ಊರನ್ನು ಕಾಪಾಡಿದ್ದಾಳೆ, ದಸರಾ ಘಟನೆ ಬಗ್ಗೆ ಎಸ್​ ಎನ್​ ಚನ್ನಬಸಪ್ಪ ಹೇಳಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
Shivamogga Dasara Elephant Incident
Shivamogga Dasara Elephant Incident

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊರುವ ವೇಳೆ ನಿನ್ನೆ ಸೋಮಣ್ಣ ಆನೆ ದಿಕ್ಕು ತಪ್ಪಿ ಓಡಿದ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಶಾಸಕ ಎಸ್.ಎನ್. ಚನ್ನಬಸಪ್ಪ, ತಾಯಿ ಚಾಮುಂಡೇಶ್ವರಿ ಕೈ ಮುರಿದುಕೊಂಡು ಊರನ್ನು ಕಾಪಾಡಿದ್ದಾಳೆ ಹಾಗೂ ದೇವರ ದಯೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಸಂಪ್ರದಾಯದಂತೆ ದಸರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ನಂದಿಧ್ವಜ ಪೂಜೆ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ಪೂರ್ಣಗೊಂಡಿದೆ. ಆದರೆ ನಾವು ನಿರೀಕ್ಷಿಸದ ಘಟನೆಯೊಂದು ನಡೆಯಿತು ಎಂದು ತಿಳಿಸಿದರು. ಸೋಮಣ್ಣ ಆನೆ ದಿಕ್ಕು ತಪ್ಪಿ ಓಡಿದ ತಕ್ಷಣ ಎಚ್ಚೆತ್ತುಕೊಂಡು, ಜನರ ಸುರಕ್ಷತೆಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಯಿತು. ಆನೆಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು, ಅಂಬಾರಿಯನ್ನು ವಾಹನದಲ್ಲಿ ಕೊಂಡೊಯ್ದು ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಎಂದು ಹೇಳಿದರು.

ಸೋಮಣ್ಣ ಆನೆಗೆ ಇದು ಮೊದಲ ಅಂಬಾರಿ ಹೊರುವ ಅನುಭವವಾಗಿದ್ದು, ಅರಣ್ಯ ಇಲಾಖೆ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದೆ. ಹಿಂದೊಮ್ಮೆ ಸಾಗರ ಆನೆಗೂ ಹೀಗೆಯೇ ಮೊದಲ ಬಾರಿ ತಾಲೀಮು ನೀಡಿ ಅಂಬಾರಿ ಹೊರಿಸಲಾಗಿತ್ತು ಎಂದು ಶಾಸಕರು ಸ್ಪಷ್ಟಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯವಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು.

ಅವಘಡದ ಸಮಯದಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹದ ಕೈ ಸ್ವಲ್ಪ ಮುರಿದೆ. ಆದರೆ ದೇವಿಯ ಒಂದೇ ಒಂದು ಆಭರಣಕ್ಕೂ ಯಾವುದೇ ತೊಂದರೆಯಾಗಿಲ್ಲ, ಯಾವ ಆಭರಣವೂ ವ್ಯತ್ಯಾಸವಾಗಿಲ್ಲ. ಚಾಮುಂಡೇಶ್ವರಿ ದೇವಿಯ ವಿಗ್ರಹವು ನಗರಪಾಲಿಕೆಯ ಆಸ್ತಿಯಾಗಿದ್ದು, ಸಂಪೂರ್ಣ ವಿಗ್ರಹವನ್ನು ಬದಲಾವಣೆ ಮಾಡಲಾಗುವುದು. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಮಹಾನಗರ ಪಾಲಿಕೆಯೇ ಭರಿಸಲಿದೆ ಹಾಗೂ ವಿಗ್ರಹವನ್ನು ಸರಿಪಡಿಸಲು ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಅಲ್ಲದೆ, ಘಟನೆಯಲ್ಲಿ 2 ಕಾರುಗಳು ಜಖಂಗೊಂಡಿದ್ದು, ಅವುಗಳಿಗೆ ಇನ್ಸೂರೆನ್ಸ್ ಕ್ಲೈಮ್ ಮಾಡಿಕೊಳ್ಳಲಾಗುವುದು ಮತ್ತು ನಾವು ಯಾವುದೇ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor