ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಮಲೆನಾಡು ಭಾಗಗಳಲ್ಲಿ ಮನೆಗೊಂದು ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಅಂಗಳಕ್ಕೆ ಕಾಲು ಇಡುವುದಿರಲಿ, ಹಗ್ಗ ಬಿದ್ದಿರುವುದನ್ನು ಕಂಡರೂ ಹಾವು ಎಂದೇ ಭಾಸವಾಗಿ ಜನ ದಿನಪೂರ್ತಿ ಭಯದಲ್ಲೇ ಕಾಲಕಳೆಯುವ ಪ್ರಸಂಗಗಳು ಇಲ್ಲಿ ನಿತ್ಯವೂ ನಡೆಯುತ್ತವೆ. ಇದರ ನಡುವೆ, ಅರಣ್ಯ ಇಲಾಖೆ ಜಾರಿಗೆ ತಂದಿರುವ ಕೆಲ ಕಠಿಣ ಎಸ್ಒಪಿ (SOP) ನಿಯಮಗಳು ಸಾರ್ವಜನಿಕರಿಗಷ್ಟೇ ಅಲ್ಲದೆ, ಅರಣ್ಯ ಸಿಬ್ಬಂದಿಗೂ ತಲೆನೋವಾಗಿ ಪರಿಣಮಿಸಿವೆ.
ಕಳೆದ 2025ರಲ್ಲಿ ಆಗಿನ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಹಾವುಗಳ ಸಂರಕ್ಷಣೆ ಕುರಿತಂತೆ ಕೆಲವು ಎಸ್ಒಪಿ ನಿಯಮಗಳಲ್ಲಿ ತಿದ್ದುಪಡಿ ತಂದಿದ್ದರು. ಅದರಂತೆ, ಕಾಳಿಂಗ ಸರ್ಪವನ್ನು ಹಿಡಿಯುವುದು ಮತ್ತು ಹಾವು ಹಿಡಿಯುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದನ್ನು ನಿಷೇಧಿಸಲಾಯಿತು. ಆದರೆ, ಸಾರ್ವಜನಿಕರು ಹಾಗೂ ಸ್ವಯಂಸೇವಕರು ಹಾವನ್ನು ಹಿಡಿಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವ ಅಂಶವು ಈಗ ಸಾರ್ವಜನಿಕರಿಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.
ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳೇನು?
ತೀರ್ಥಹಳ್ಳಿ, ಆಗುಂಬೆ ಹಾಗೂ ಮೇಗರವಳ್ಳಿ ಭಾಗಗಳಲ್ಲಿ ಕಾಳಿಂಗ ಸರ್ಪ ಸೇರಿದಂತೆ ಅತಿ ವಿಷಪೂರಿತ ಹಾವುಗಳು ಹೆಚ್ಚಾಗಿ ಕಂಡುಬರುತ್ತವೆ. ಡಿಸೆಂಬರ್ ತಿಂಗಳು ಹಾವುಗಳ ಸಂತಾನೋತ್ಪತಿ ಕಾಲ, ಈ ಸಂದರ್ಭದಲ್ಲಿ ಅವು ಅತ್ಯಂತ ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ವಿವಿಧ ಜಾತಿಯ ಹಾವುಗಳ ವರ್ತನೆಯೂ ಭಿನ್ನವಾಗಿರುತ್ತದೆ. ಇವುಗಳನ್ನು ಪಳಗಿಸಲು ವಿಶೇಷ ತರಬೇತಿ ಮತ್ತು ಅಪಾರ ಅನುಭವವಿರುವ ವ್ಯಕ್ತಿಗಳು ಬೇಕಾಗುತ್ತಾರೆ. ಆದರೆ, ಜಿಲ್ಲೆಯಲ್ಲಿ ಪ್ರಸ್ತುತ ಬೆರಳೆಣಿಕೆಯಷ್ಟು ಮಾತ್ರ ಉರಗ ತಜ್ಞರಿದ್ದಾರೆ.ಮತ್ತೊಂದೆಡೆ, ಅರಣ್ಯ ಸಿಬ್ಬಂದಿಗಳು ಮಾತ್ರ ಹಾವನ್ನು ರಕ್ಷಿಸಬೇಕು ಮತ್ತು ಸಾರ್ವಜನಿಕರು ಹಾವಿನ ರಕ್ಷಣೆಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಸ್ಒಪಿ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ.
ಆದರೆ, ಇದುವರೆಗೂ ಎಷ್ಟೋ ಅರಣ್ಯ ಸಿಬ್ಬಂದಿಗೆ ವೈಜ್ಞಾನಿಕವಾಗಿ ಹಾವನ್ನು ಹಿಡಿಯುವುದು ಹೇಗೆ, ಯಾವ ಸಂದರ್ಭದಲ್ಲಿ ಹಾವು ಹೇಗೆ ಆಕ್ರಮಣ ಮಾಡುತ್ತದೆ ಮತ್ತು ಅದನ್ನು ನಿಭಾಯಿಸುವುದು ಹೇಗೆ ಎಂಬ ತರಬೇತಿಯೇ ಸಿಕ್ಕಿಲ್ಲ. ಕಾಳಿಂಗ್ ಸರ್ಪ ನಾಗರ ಹಾವು, ಕೆರೆ ಬಡಕ, ಬಿಳಿನಾಗರ, ಕೊಳಕು ಮಂಡಲ, ಮಿಡಿನಾಗರ, ಬೆಬ್ಬಾವು ಇಂತಹ ಹಾವುಗಳನ್ನು ಹಿಡಿಯಬೇಕಾದರೆ ಒಂದೊಂದು ಹಾವಿಗೂ ನಿಗದಿತವಾದ ತರಬೇತಿ ಪಡೆಯಬೇಕಾಗುತ್ತದೆ. ಒಂದು ಹಾವಿನ ಮಾದರಿಯಲ್ಲಿ ಮತ್ತೊಂದು ಹಾವನ್ನು ಹಿಡಿಯಲು ಸಾಧ್ಯವೇ ಇಲ್ಲ ನೈಸರ್ಗಿಕವಾಗಿ ಬೆಳೆದ ಹಾವುಗಳು ತಕ್ಷಣಕ್ಕೆ ಮಾನವ ಸಂಪರ್ಕಕ್ಕೆ ಬಂದಾಗ ಯಾವರೀತಿ ಆಕ್ರಮಣಶಾಲಿಯಾಗಿರುತ್ತದೆ ಎಂಬುವುದನ್ನು ಊಹಿಸಲು ಸಾಧ್ಯವಿಲ್ಲ. ಈ ರೀತಿಯಾದಂತಹ ತರಬೇತಿಯನ್ನು ಕೇವಲ ನಾಲ್ಕೈದು ತಿಂಗಳಲ್ಲಿ ಅರಣ್ಯ ಸಿಬ್ಬಂದಿಗಳು ಕಲಿಯಲು ಸಾಧ್ಯವಿಲ್ಲ. ಈಗಾಗಲೇ ಪ್ರತಿ ಅರಣ್ಯವಲಯದಲ್ಲೂ ಸಿಬ್ಬಂದಿಗಳಿಗೆ ಹಾವು ಹಿಡಿಯುವ ತರಬೇತಿ ನೀಡಲಾಗಿದೆ. ಅರಣ್ಯ ಇಲಾಖೆಯ ಕೆಲಸಗಳನ್ನೂ ಮಾಡಿಕೊಂಡು ಹಾವುಗಳನ್ನೂ ಹಿಡಿಯಬೇಕೆಂದರೆ ಅರಣ್ಯ ಸಿಬ್ಬಂದಿ ಹೆಚ್ಚಿನ ಹೊರೆಯಾಗುತ್ತದೆ. ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಕರೆ ಬಂದಾಗ ತಕ್ಕಣಕ್ಕೆ ಸ್ಪಂದಿದಲು ಸಾಧ್ಯವಿಲ್ಲ. ಈಗಾಗಲೇ ಅರಣ್ಯ ಅಧಿಕಾರಿಗಳು ತಮ್ಮ ವಲಯದಲ್ಲಿ ಇರುವ ಹಾವು ಹಿಡಿಯುವವರ ಹೆಸರುಗಳನ್ನು ಮೇಲಾಧಿಕಾರಿಗಳಿಗೆ ನೀಡಿದ್ದಾರೆ. ಆದರೆ ಸರ್ಕಾರ ಈವರೆಗೂ ಹಾವುಹಿಡಿಯುವವರಿಗೆ ಅಧಿಕೃತ ಪರವಾನಿಗೆ ಮತ್ತು ಗುರುತಿನ ಚೀಟಿ ನೀಡಿಲ್ಲ. ಒಂದು ವೇಳೆ ಅರಣ್ಯ ಸಿಬ್ಬಂದಿಗಳೇ ಹಾವು ಹಿಡಿಯುವ ಸನ್ನಿವೇಶ ಎದುರಾದರೆ ಸಕಾಲಕ್ಕೆ ಸಾರ್ವಜನಿಕರಿಗೆ ಸ್ಪಂದಿಸುವುದು ಕಷ್ಟವಾಗುತ್ತದೆ.
ಸಾರ್ವಜನಿಕರ ಸಂಕಷ್ಟಗಳೇನು?
ಈಗ ಮಲೆನಾಡು ಭಾಗದಲ್ಲಿ ಅಡಿಕೆ ಕೊಯ್ಲಿನ ಬಿಡುವಿಲ್ಲದ ಕೆಲಸ ನಡೆಯುತ್ತಿದೆ. ಈ ವೇಳೆ ತೋಟಗಳಲ್ಲಿ ಕಳೆ ತೆಗೆಯುವ ಕೆಲಸ ಮಾಡುವುದರಿಂದ ಪೊದೆಗಳು ಕಡಿಮೆಯಾಗಿರುತ್ತವೆ. ಜೊತೆಗೆ ಮನೆಗಳು ತೋಟದ ಹತ್ತಿರವೇ ಇರುವುದರಿಂದ, ಹಾವುಗಳು ನೇರವಾಗಿ ಮನೆ ಮತ್ತು ದನದ ಕೊಟ್ಟಿಗೆ ಒಳಗೆ ನುಗ್ಗುತ್ತಿವೆ.
ಮನೆಯಲ್ಲಿ ಹಾವು ಬಂದಾಗ ಪರಿಚಯವಿರುವ ಉರಗ ತಜ್ಞರಿಗೆ ಫೋನ್ ಮಾಡೋಣವೆಂದರೆ ಅವರಿಗೆ ಕಾನೂನಿನ ತೊಡಕುಗಳು ಎದುರಾಗುತ್ತವೆ. ಇನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ, ಅಲ್ಲಿ ತರಬೇತಿ ಪಡೆದ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತದೆ. ಇದರಿಂದಾಗಿ, ವಿಷಪೂರಿತ ಹಾವನ್ನು ಹೊರಹಾಕಿಸಲಾಗದೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಯುವ ದುಸ್ಥಿತಿ ನಿರ್ಮಾಣವಾಗಿದೆ. ಕೆಲವರು ಹಾವಿನ ಕಾಟದಿಂದ ಬೇಸತ್ತು ಹಾವುಗಳನ್ನು ಘಾಸಿಗೊಳಿಸುವು ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹಾವುಗಳ ಸಂರಕ್ಷಣೆಗೆಂದು ಮಾಡಿದ ಕಾನೂನುಗಳು ಇಲ್ಲಿ ಶಾಪವಾಗಿ ಪರಿಣಮಿಸುತ್ತಿದೆ. ಮಲೆನಾಡಿನಲ್ಲಿ ಸಾವಿರಾರು ಹಾವುಗಳನ್ನು ಹಿಡಿದ ನುರಿತ ಉರಗ ತಜ್ಞರಿದ್ದಾರೆ. ಸ್ಥಳೀಯವಾಗಿ ಇರುವ ಉರಗ ತಜ್ಞರಿಗೆ ಇಲಾಖೆಯ ನಿಯಮನುಗುಣವಾಗಿ ಬಳಸಿಕೊಳ್ಳುವ ಅವಕಾಶ ನೀಡಬೇಕಿದೆ. ಮುಖ್ಯವಾಗಿ ಆಗುಂಬೆ ಮೇಗರವಳ್ಳಿ, ಮಂಡಗದ್ದೆ ರೇಂಜ್ಗಳಲ್ಲಿ ಸ್ಥಳೀಯವಾಗಿ ಉರಗ ತಜ್ಞರನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಹಾವನ್ನು ಹಿಡಿಯುವ ತಜ್ಞರು ಟ್ರೈನಿಂಗ್ ಅಲ್ಲಿ ಭಾಗವಹಿಸಿದಕ್ಕೆ ನಾವು ಈಗಾಗಲೇ ಸರ್ಟಿಫಿಕೇಟ್ ಕೊಟ್ಟಿದ್ದೇವೆ. ಅಧಿಕೃತವಾಗಿ ಹಾವು ಹಿಡಿಯೋಕೆ ಪರವಾನಿಗೆ ಅಥವಾ ಗುರುತಿನ ಚೀಟಿ ಇನ್ಮುಂದೆ ಕೊಡಬೇಕು. ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳುತ್ತೇವೆ.
ಅಜ್ಜಯ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ
ವರದಿ : ಪ್ರತಾಪ್ ತೀರ್ಥಹಳ್ಳಿ
