ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಳೆದ ಇಷ್ಟೊತ್ತಿಗೆ ಜಿಲ್ಲೆಯಲ್ಲಿ ಒಂದು ಆಪ್ ಪೀಕ್ನಲ್ಲಿತ್ತು, ತಾವು ದುಡ್ಡುಹಾಕಿದ್ದಷ್ಟೆ ಅಲ್ಲದೆ, ತಮ್ಮವರ ಬಳಿಯು ಶಿಪಾರಸ್ಸುಮಾಡಿ ಜೋರಾಗಿ ದುಡ್ಡುಹಾಕಿಸಿದ್ದರು. ಅಡಿಕೆ ಮಾರಿ ಬಂದ ದುಡ್ಡು ಸೇರಿದಂತೆ ಆಪ್ಗೆ ಸೇರಿದ್ದ ದುಡ್ಡಿನ ಲೆಕ್ಕ ಇವತ್ತಿಗೂ ಅಚ್ಚರಿ ಮೂಡಿಸುತ್ತದೆ.
ಇದೀಗ ಈ ವಿಷಯದಲ್ಲಿ ಎಫ್ಬಿಟಿ ಆಪ್ನಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಈ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಜೈ ಕನ್ನಡಾಂಬೆ ಮಹಾಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನಂಜುಂಡಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯೊಂದರಲ್ಲೇ 400ಕ್ಕೂ ಹೆಚ್ಚು ಮಂದಿ ಎಫ್ಬಿಟಿ ಆಪ್ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳ ರೈತರು, ಮಹಿಳೆಯರು, ಪಿಂಚಣಿದಾರರು, ವೃದ್ಧರು, ವಿಧವೆಯರು ಹಾಗೂ ವಿದ್ಯಾರ್ಥಿಗಳು ಈ ಆಪ್ನಲ್ಲಿ ಹಣ ಹೂಡಿಕೆ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಸಿಐಡಿ ತನಿಖೆಗೆ ಒತ್ತಾಯ
ಹೂಡಿಕೆ ಮಾಡಿದವರಲ್ಲಿ ಕೆಲವರು ತಮ್ಮ ಚಿನ್ನಾಭರಣಗಳನ್ನು ಅಡವಿಟ್ಟು ಹಣ ಹೊಂದಿಸಿದ್ದಾರೆ. ಮತ್ತೆ ಕೆಲವರು ಕೈಬಡ್ಡಿಗೆ ಸಾಲ ಪಡೆದು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇದೀಗ ಹಣ ಕಳೆದುಕೊಂಡಿರುವ ಸಂತ್ರಸ್ತರು ಸಂಕಷ್ಟ ಎದುರಿಸುತ್ತಿದ್ದು, ಅವರಿಗೆ ನ್ಯಾಯ ದೊರಕಿಸಿಕೊಡುವ ಅಗತ್ಯವಿದೆ ಎಂದು ಒತ್ತಾಯಿಸಿದರು.ಎಫ್ಬಿಟಿ ಆಪ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಆದರೆ, ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿರುವ ಇನ್ನೂ ಕೆಲವರನ್ನು ಬಂಧಿಸಿಲ್ಲ ಎಂದು ನಂಜುಂಡಪ್ಪ ಆರೋಪಿಸಿದರು.
ಪ್ರಕರಣದ ತನಿಖೆ ನಡೆಯುತ್ತಿರುವ ರೀತಿಯ ಬಗ್ಗೆ ಅನುಮಾನಗಳಿವೆ. ಆದ್ದರಿಂದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು. ಆಪ್ನಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ರಮೇಶ್, ನಾಗೇಶ್, ರಮೇಶ್, ವೀರೇಶ್, ರಂಗಪ್ಪ ಹಾಗೂ ಪರಮಶಿವಪ್ಪ ಉಪಸ್ಥಿತರಿದ್ದರು.
