ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಶಿವಮೊಗ್ಗ ಜಿಲ್ಲೆಯ ಮೂಲದ ಹಾಗೂ ನಕಲಿ ಔಷಧಗಳ ಮರು ಪ್ಯಾಕಿಂಗ್ ಮತ್ತು ಮಾರಾಟ ಜಾಲದ ಪ್ರಕರಣದ ಕಿಂಗ್ ಪಿನ್ ಪ್ರಶಾಂತ್ ರಾಜನ್ ಬಾಬು (35) ಅರೆಸ್ಟ್ ಆಗಿದ್ದಾನೆ.ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿದೆ.
ದಶಕಗಳಿಂದ ಔಷಧ ಮಾರಾಟ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ಪ್ರಶಾಂತ್, ಈ ಹಿಂದೆ ಪ್ರತಿಷ್ಠಿತ ಔಷಧ ಕಂಪನಿಗಳ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಬಳಿಕ ತಮ್ಮದೇ ಔಷಧ ಮಾರಾಟ ಏಜೆನ್ಸಿಯನ್ನು ಆರಂಭಿಸಿದ್ದರು. ಅವರಿಗೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಸೂರು ಗ್ರಾಮದ ಸ್ನೇಹಿತ ವೆಂಕಟೇಶ್ ಸಾಥ್ ನೀಡಿದ್ದ ಎನ್ನಲಾಗಿದೆ. ನಂತರ ನಕಲಿ ಔಷಧಗಳ ಮಾರಾಟದ ದಂಧೆಯಲ್ಲಿ ತೊಡಗಿಕೊಂಡಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಬಿಡದಿಯ ಕುರುಬರಕೇರನ ಹಳ್ಳಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ ನಂತರ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಪ್ರಶಾಂತ್ ವಿದೇಶಕ್ಕೆ ಪರಾರಿಯಾಗಿದ್ದರು. ಅವರ ಪತ್ತೆಗೆ ತನಿಖಾ ತಂಡ ಲುಕ್‌ಔಟ್ ನೋಟಿಸ್ ಹೊರಡಿಸಿತ್ತು. ಅಜರ್‌ಬೈಜಾನ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಶಾಂತ್ನನ್ನ ಸೋಮವಾರ ಬೆಳಿಗ್ಗೆ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ. ನಕಲಿ ಔಷಧಗಳ ತಯಾರಿಕೆ, ಮರು ಪ್ಯಾಕಿಂಗ್, ವಿತರಣೆ ಮತ್ತು ಮಾರಾಟದ ಜಾಲಕ್ಕೆ ಸಂಬಂಧಿಸಿದಂತೆ ಅವರ ವಿಚಾರಣೆ ಮುಂದುವರಿದಿದೆ.
