ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕಳೆದ 2 ತಿಂಗಳಿಂದ ಅಡಿಕೆಯದ್ದೇ ಸುದ್ದಿ. ಮೊನ್ನೆ ಸಿಎಂ ಡಿ.ಕೆ. ಶಿವಕುಮಾರ್ ತೀರ್ಥಹಳ್ಳಿಗೆ ಬಂದಾಗಲೂ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದು, ಸರ್ ನಮ್ಮ ಅಡಿಕೆ ಬೆಳೆಗಾರರು ಕಷ್ಟದಲ್ಲಿದ್ದಾರೆ. ಅಡಿಕೆ ಕುರಿತಾಗಿ ರೈತರಿಗೆ ಖುಷಿಯಾಗುವಂತಹ ಒಂದು ಹೇಳಿಕೆ ಕೊಡಿ ಎಂದು. ಈ ಬಾರಿ ಅಡಿಕೆ ವಿಚಾರವಾಗಿ ಇಷ್ಟೊಂದು ಚರ್ಚೆ ಏಕೆ? ಅಡಿಕೆ ರೇಟ್ ಏನಾಗುತ್ತಿದೆ? ಅಡಿಕೆ ರೇಟು ಮೇಲೆಕ್ಕೆ ಏಕೆ ಏರುತ್ತಿಲ್ಲ! ಹಸಿ ಅಡಿಕೆಯನ್ನೆ ಕೊಡುವವರು ಮೊದಲ ಕೊಯಿಲು ಯಾವಾಗ ಮಾಡೋದೊಳ್ಳೆಯದು!? ಮುಂದಿನ ದಿನಗಳಲ್ಲಿ ಅಡಿಕೆ ರೇಟ್ ಏನಾಗಬಹುದು? ಯಾರಿಗೆ ಪ್ಲಸ್, ಯಾರಿಗೆ ಮೈನಸ್ ? ಹೀಗೆ ಸುಮಾರು ವಿಚಾರ ಹೇಳುವುದಿದೆ!
ಗುಟ್ಕಾ ಬ್ಯಾನ್ ಅಂತಾ ಆದಾಗಿನಿಂದ ಅಡಿಕೆ ವಿಚಾರ ಮುನ್ನೆಲೆಯಲ್ಲಿದೆ! ಬರ ಒಂದ್ ಕಡೆಯಾದರೆ, ಕೊಯಲಿಗೆ ಬಂದ ಅಡಿಕೆನಾ ಮರತುದಿಯಿಂದ ಇಳಿಸದಾ ಬ್ಯಾಡವಾ ಎಂಬ ಚಿಂತೆ ರೈತರ ತಲೆಯಲ್ಲಿ ಕುಂತಿದೆ!ಕೂಲಿಕೊಟ್ಟು ಕೊನೆಗಾರನ್ನ ಕರೆಸಿ, ಅಡ್ಕೆ ಕೊನೆಗೆ ಗೋಣಿ ಚೀಲದ ಹರಡಿ ಬಿದ್ ಅಡಿಕೆ ಒಟ್ಟು ಮಾಡುವಷ್ಟು ಹೊತ್ತಿಗೆ ಏನಾದರೂ ಅಡಿಕೆ ರೇಟು ಕ್ವಿಂಟಾಲ್ಗೆ ಐವತ್ತು ಸಾವಿರದ ಮೇಲೊಂದು ಎರಡು ಮೂರು ಸಾವರ ಜಾಸ್ತಿ ಆದರೆ ಒಳ್ಳೆಯದು ಅನ್ನೋದು ಬೆಳೆಗಾರರ ಆಲೋಚನೆ! ಏಕೆಂದರೆ,ಅಡಿಕೆ ಬೆಳದೋರೆಲ್ಲಾ ಅಡಕೆ ಚೇಣಿ ಮಾಡಲ್ಲ! ಹಸಿ ಅಡಕೆನಾ, ಮಾರ್ಕೆಟ್ನಲ್ಲಿ ರೇಟಿಗೆ ತಕ್ಕಂತೆ ಅಳೆದು ಮೊಗೆದು, ತೂಗಿ ತೂಕ ಹಾಕಿ ಕೊಟ್ಟು, ಈ ಸಲದ್ದು ಆಯ್ತಪ್ಪ ಅಂತಾ ಸುರ್ ಅಂದು ಸಾವರಿಸ್ಕತ್ತಾರೆ.
ಕಳೆದ ವರ್ಷ, ಅಡಿಕೆ ರೇಟ್ ಸ್ವಲ್ಪ ಉಪಕಾರ ಮಾಡಿತ್ತು, ಈಸಲನೂ ದೇವರ ದಯೇ ಯಿಂದ ಹಾಗೆ ಆಗುತ್ತೆ ಅಂದ್ಕೊಂಡಿದ್ದ ಬೆಳೆಗಾರರಿಗೆ ಅರ್ಧಲಕ್ಷಕ್ಕಿಂತ ಕೆಳಗಿಳಿದಿರೋ ದರ, ಬ್ಯಾಟರಿ ಬೇಲಿ ಕರೆಂಟ್ ಮುಟ್ಟಸ್ತಿದೆ!ಚನ್ನಗಿರಿ ಕಡೆಯವರು ಫಸ್ಟ್ ಕೊಯಿಲು ಆರಂಭಿಸುವಾಗಲೇ ರೇಟ್ ಕಾಣಬೇಕಿದ್ದ ಅಡಿಕೆ, ಈ ಸಲ ಸೆಪ್ಟೆಂಬರ್ ಮುಗಿತಾ ಬಂದರೂ 48-49 ದಾಟುತ್ತಿಲ್ಲ.ಹಂಗಾಗಿಯೇ ಬೆಳೆಗಾರರಿಗೆ ಚಿಂತೆ ತಲೆಬಿಸಿ ಮಾಡಿಟ್ಟಿದೆ.
ಗುಟ್ಕಾ ಬ್ಯಾನ್ ನಂತರ ಅಡಿಕೆ ರೇಟ್ ಎಷ್ಟಿದೆ?
ಆಗಸ್ಟ್ 10 ರಂದು ಗುಟ್ಕಾ ಬ್ಯಾನ್ ಆದೇಶ ಹೊರಬಿದ್ದಾಗ ಶಿವಮೊಗ್ಗದ ಎಪಿಎಂಸಿ ಅಡಿಕೆ ಮಂಡಿಯಲ್ಲಿ ರಾಶಿ ಇಡಿ (ಹೆಚ್ಚಾಗಿ ರೈತರು ಮಾರಾಟ ಮಾಡುವ ಅಡಿಕೆ) ಗರಿಷ್ಠ ದರ 53,000 ರಿಂದ 54,000 ರೂ. ಆಸುಪಾಸಿನಲ್ಲಿತ್ತು. ನಂತರದ ದಿನಗಳಲ್ಲಿ ರೇಟು ಇಳಿಯೋಕೆ ಶುರುವಾಗಿ 51,000 ರಿಂದ 52,000 ರೂ. ಆಸುಪಾಸಿನಲ್ಲಿ ಹಾವು-ಏಣಿ ಆಡುತ್ತಿತ್ತು. ತದನಂತರ ಅಂದರೆ ಸೆಪ್ಟೆಂಬರ್ 11 ರ ನಂತರ 50,000 ದಿಂದ ಕೆಳಕ್ಕೆ ಇಳಿಯಿತು. ನಿನ್ನೆ ಅಂದರೆ ಸೆಪ್ಟೆಂಬರ್ 23 ಕ್ಕೆ ರಾಶಿ ಇಡಿ ಅಡಿಕೆಯ ಗರಿಷ್ಠ ದರ 48,499 ರೂ.ಗೆ ಬಂದು ನಿಂತಿದೆ. ಈ ರೇಟಿನ ಕಥೆ ಮುಂದೇಗೆ ಅಂತಾ ಕೇಳಿದ್ರೆ, ಇನ್ನು ಸ್ವಲ್ಪದಿನ ಅಥವಾ ಒಂದೆರಡು ತಿಂಗಳು ಅಡಿಕೆ ರೇಟ್ ತೀರಾ ಹೆಚ್ಚೂ ಆಗಲ್ಲ, ತೀರಾ ಕಡಿಮೆಯೂ ಆಗಲ್ಲ ಅನ್ನೋದು ತಜ್ಞರ ಹೇಳಿಕೆ.
ಅಡಿಕೆ ರೇಟ್ ಹೆಚ್ಚೂ ಆಗಲ್ಲ, ತೀರಾ ಕಡಿಮೆಯೂ ಆಗಲ್ಲ; 1 ತಿಂಗಳು ಹೀಗೆ : ಮಹೇಶ್ ಹುಲ್ಕುಳಿ, ಮ್ಯಾಮ್ಕೋಸ್ ಉಪಾಧ್ಯಕ್ಷರು
ಅಡಿಕೆಯ ರೇಟ್ ವಿಚಾರವಾಗಿ ನಮ್ಮ ಮಲೆನಾಡು ಟುಡೆಗೆ ನಿರಂತರ ಫೋನ್ ಕರೆಗಳು ಬರ್ತಿದ್ದರಿಂದ, ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನಾವು ಅಡಿಕೆ ರೇಟ್ ಏನಾಗಬಹುದು? ಅಂತ ತಿಳ್ಕೊಳ್ಳೋಕೆ ಮ್ಯಾಮ್ಕೋಸ್ ಉಪಾಧ್ಯಕ್ಷರಾದ ಮಹೇಶ್ ಹುಲ್ಕುಳಿ ಅವರಿಗೆ ಫೋನ್ ಮಾಡಿದ್ವಿ. ಈ ಕುರಿತಾಗಿ ಮಾಹಿತಿ ನೀಡಿದ ಅವರು, “ಅಡಿಕೆ ರೇಟ್ ಹೆಚ್ಚೂ ಆಗುವುದಿಲ್ಲ, ತೀರಾ ಕಡಿಮೆಯೂ ಆಗುವುದಿಲ್ಲ. ಈ ಸಮಯದಲ್ಲಿ ಅಡಿಕೆ ರೇಟ್ ಇಷ್ಟು ಪ್ರಮಾಣದಲ್ಲಿ ಕಡಿಮೆ ಆಗಲು ಕಾರಣ ಬಹಳಷ್ಟಿದೆ.
ಈ ಹಿಂದೆ ರೇಟ್ 60 ಸಾವಿರಕ್ಕೆ ಹೋದಾಗ ರೈತರು ಯಾರೂ ಸಹ ಹೆಚ್ಚಾಗಿ ಮಂಡಿಗೆ ಅಡಿಕೆ ದಾಟಿಸಲಿಲ್ಲ! ದರ ಇನ್ನೂ ಹೆಚ್ಚಾಗಬಹುದು ಎಂಬ ಕಾರಣದಿಂದ ಮನೆಯಲ್ಲಿ ಸ್ಟಾಕ್ ಇಟ್ಟುಕೊಂಡಿದ್ದರು. ಇದರಿಂದ ಮಂಡಿಗೆ ಅಡಿಕೆ ಬರುವ ಪ್ರಮಾಣ ಕಡಿಮೆಯಾಯ್ತು.ಆನಂತರ ರೇಟು ಬಿದ್ದೋಗಿದೆ. ರೈತರು ಅಡಿಕೆಯನ್ನು ಮಂಡಿಗೆ ಹಾಕಿ ವ್ಯಾಪಾರ ನಡೆಸಲು ಆರಂಭಿಸಿದರೆ ದಿನಕಳೆದಂತೆ ವಹಿವಾಟು ನಡೆದು ಅಡಿಕೆ ರೇಟ್ ಹೆಚ್ಚಾಗುವ ಸಾಧ್ಯತೆ ಇದೆ. ಅಡಿಕೆಯೇ ಮಂಡಿಗೆ ಬಾರದಿದ್ದರೆ ರೇಟ್ ನಿಗದಿ ಮಾಡುವುದಾದರೂ ಹೇಗೆ ಎನ್ನೋದು ಮಹೇಶ್ ಹುಲ್ಕುಳಿಯವರ ಪ್ರಶ್ನೆ! ಅಂತಿಮವಾಗಿ ಅವರು ಹೇಳಿದ್ದು, ನಿದಾನಕ್ಕಾಗಿಯಾದರೂ ಹೊಸ ಅಡಿಕೆ ಮಂಡಿಗೆ ಬರಲು ಆರಂಭವಾಗಿದ್ದು, ದಿನಕಳೆದಂತೆ ವಹಿವಾಟು ಉತ್ತಮವಾಗಬಹುದು, ಇನ್ನೊಂದೆರಡು ತಿಂಗಳಲ್ಲಿ ರೇಟ್ ಚೇತರಿಸಿಕೊಳ್ಳಲುಬಹುದು!
ಅಡಿಕೆ ಸ್ಮಗ್ಲಿಂಗ್ ನಿಂತರೆ ಖಂಡಿತ ಅಡಿಕೆ ರೇಟ್ ಹೆಚ್ಚಾಗುತ್ತದೆ : ರಮೇಶ್ ಹೆಗ್ಡೆ, ಅಡಿಕೆ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ
ದಕ್ಷಿಣ ಏಷ್ಯಾದ ರಾಷ್ಟ್ರಗಳಿಂದ ಸಾಕಷ್ಟು ಅಡಿಕೆಗಳು ದೇಶಕ್ಕೆ ಆಮದಾಗುತ್ತಿವೆ. ಮುಖ್ಯ ವಾಣಿಜ್ಯ ರಿಯಾಯಿತಿಯನ್ನು ದುರುಪಯೋಗಪಡಿಸಿಕೊಂಡು ಅಗ್ಗದ ಅಡಿಕೆಗಳನ್ನು ತರಿಸಲಾಗುತ್ತದೆ. ಇದರಿಂದಾಗಿ ಭಾರತದ ಉತ್ಕೃಷ್ಟ ಗುಣಮಟ್ಟದ ಅಡಿಕೆಯ ದರಗಳು ಕಡಿಮೆಯಾಗುತ್ತವೆ. ಆದ್ದರಿಂದ ಕೇಂದ್ರ ಸರ್ಕಾರ ಗಡಿ ರಾಜ್ಯಗಳಾದ ಮಿಜೋರಾಂ, ಮಣಿಪುರದಂತಹ ಪ್ರದೇಶಗಳಿಂದ ಬರುವ ಅಡಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅಡಿಕೆ ಸ್ಮಗ್ಲಿಂಗ್ ತಡೆಯುವುದರಿಂದ ಮಾತ್ರ ರಾಜ್ಯದಲ್ಲಿ ಅಡಿಕೆ ಬೆಲೆ ಹೆಚ್ಚಾಗುವುದಕ್ಕೆ ಸಾಧ್ಯವಾಗುತ್ತದೆ. ಅಡಿಕೆ ಮೌಲ್ಯವರ್ಧನೆಗೆ ಸರ್ಕಾರ ಒತ್ತು ನೀಡಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ನೀತಿಗಳು ಮತ್ತು ಅಪಪ್ರಚಾರವೇ ಇಂದಿನ ಮಾರುಕಟ್ಟೆ ಕುಸಿತಕ್ಕೆ ಮುಖ್ಯ ಕಾರಣ ; ಬಿವೈ ರಾಘವೇಂದ್ರ
ಅಡಕೆ ದರ ಕುಸಿತಕ್ಕೆ ಕಾಂಗ್ರೆಸ್ ನೀತಿಗಳೇ ಕಾರಣ, ಅಡಕೆ ದರ ಕುಸಿತಕ್ಕೆ ಕೇಂದ್ರ ಸರ್ಕಾರದ ತೆರಿಗೆಯೇ ಕಾರಣ ಎಂಬ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೇಳಿಕೆ ಸಂಪೂರ್ಣ ತಪ್ಪು ಕಲ್ಪನೆಯಿಂದ ಕೂಡಿದೆ. ನಿಜ ಹೇಳಬೇಕೆಂದರೆ, ವಿದೇಶಗಳಿಂದ ಅಡಕೆ ಆಮದು ತಡೆಯುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಆಮದು ಸುಂಕವನ್ನ ಹೆಚ್ಚಿಸುವ ದಿಟ್ಟ ಕ್ರಮ ಕೈಗೊಂಡಿದೆ. ಅಂತಾರಾಷ್ಟ್ರೀಯ ಒಪ್ಪಂದಗಳ ಕಾರಣ ಕೆಲವು ಸರಕುಗಳನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾದರೂ, ಅಡಕೆ ಆಮದನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲಾ ಹಂತಗಳಲ್ಲಿ ಕೇಂದ್ರ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೀತಿಗಳು ಮತ್ತು ಅಪಪ್ರಚಾರವೇ ಇಂದಿನ ಮಾರುಕಟ್ಟೆ ಕುಸಿತಕ್ಕೆ ಮುಖ್ಯ ಕಾರಣ. ರೈತರು ಈಗಾಗಲೇ ಬರಗಾಲ, ವಿದ್ಯುತ್ ಅಭಾವ ಮತ್ತು ಮಳೆ ಕೊರತೆಯಿಂದ ಕಷ್ಟದಲ್ಲಿದ್ದಾರೆ. ಅಡಕೆ ಬೆಳೆಗಾರರು ಇನ್ನು ಕೆಲವೇ ದಿನಗಳು ತಾಳ್ಮೆಯಿಂದ ಕಾಯಬೇಕು. ಮುಂದಿನ ದಿನಗಳಲ್ಲಿ ಅಡಕೆಗೆ ಖಂಡಿತ ಉತ್ತಮ ಬೆಲೆ ದೊರೆಯಲಿದ್ದು, ಮಾರುಕಟ್ಟೆ ಪರಿಸ್ಥಿತಿ ಸುಧಾರಿಸಲಿದೆ.
ಅಡಿಕೆ ಬೆಲೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ : ಪ್ರಶಾಂತ್ ಶೆಟ್ಟಿ, ಅಡಿಕೆ ಚೇಣಿದಾರರು
ಅಡಿಕೆ ರೇಟ್ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಾರಿ ಈ ರೇಟ್ನಲ್ಲಿ ಚೇಣಿ ಹಿಡಿದು ನಾವು ಅಡಿಕೆಯನ್ನು ಕೊಡುವಾಗ ರೇಟ್ ಕಡಿಮೆಯಾದರೆ ನಷ್ಟ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಒಂದೆಡೆ ಅಡಿಕೆಗೆ ರೋಗ ಸಹ ಬಂದಿದ್ದು, ಉದುರುತ್ತಿದೆ, ಹಾಗಾಗಿ ಫಸಲು ಪೂರ್ತಿ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಅಡಿಕೆ ರೇಟ್ ಸಹ ಕಡಿಮೆಯಾಗುತ್ತಿದ್ದು, ನಮಗಷ್ಟೇ ಅಲ್ಲದೆ ತೋಟದ ಮಾಲೀಕರಿಗೂ ನಷ್ಟ ಉಂಟಾಗುತ್ತಿದೆ. ಸರ್ಕಾರ ಅಡಿಕೆ ರೇಟ್ ಅನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ರೈತರ ಹಿತ ಕಾಯಬೇಕಿದೆ.
ಯಾರಿಗೆ ಪ್ಲಸ್, ಯಾರಿಗೆ ಮೈನಸ್?
ಅವರನ್ನ ಇವರನ್ನ ಅಂತಾ ವಿಚಾರಿಸಿದಾಗ, ರೇಟು ಕಡಿಮೆಯಾಗುವುದಕ್ಕೆ ಮಂಡಿಗೆ ಅಡಿಕೆ ಬರದೆ ಇರುವುದು, ಇನ್ನೊಂದು ಕಡೆ ಕೊಳ್ಳುವವರು ಸಹ ಡಿಮ್ಯಾಂಡ್ ತೋರಿಸದೆ ಇರೋದು ಕಾರಣ ಅಂತಾ ಗೊತ್ತಾಗುತ್ತಿದೆ. ಇದರ ಜೊತೆಗೆ, ಅಡಿಕೆ ಮೇಲಿನ ಸುಂಕವೂ ಪರಿಣಾಮ ಬೀರಿದೆ. ಅಲ್ಲದೆ ಅಡಿಕೆಗೆ ಬಳಸುವ ಬಣ್ಣ ಮತ್ತು ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿ ತಡೆದ ಘಟನೆಗಳು ಹೀಗೆ ಹತ್ತಾರು ವಿಚಾರಗಳು ರೇಟ್ ಮೇಲೆ ಚೂರು ಚೂರು ಪರಿಣಾಮ ಬಿದ್ದಿದೆ ಅನ್ನೋದು ಸದ್ಯಕ್ಕೆ ಸಿಕ್ಕ ಕನ್ ಕ್ಲೂಷನ್. ಇನ್ನೂ ರೇಟು ಯಾವಾಗ ಹೆಚ್ಚಾಗುತ್ತೆ ಎಂದು ಕೇಳಿದರೆ, ಇನ್ನೊಂದೆರಡು ತಿಂಗಳು ತಾಳಿ ಎನ್ನುವ ಉತ್ತರವೂ ಸಿಕ್ಕಿದೆ. ಈ ಸಂದರ್ಭ ಸನ್ನಿವೇಶದಲ್ಲಿ ಅಡಿಕೆ ತೋಟದ ಮಾಲೀಕರಿಗೆ ದೊಡ್ಡ ಹೊಡೆತ ಬೀಳುವ ಸಂಭವ ಹೆಚ್ಚು
ಏಕೆಂದರೆ ಕಳೆದ ಬಾರಿ ಇದೇ ಸಮಯದಲ್ಲಿ ಅಡಿಕೆ ರೇಟ್ 58-60 ಸಾವಿರದವರೆಗೆ ಹೋಗಿತ್ತು. ಅದರಿಂದಾಗಿ ತೋಟದ ಮಾಲೀಕರು ಚೇಣಿದಾರರಿಗೆ ತಮ್ಮ ಹಸಿ ಅಡಿಕೆಯನ್ನು ಕ್ವಿಂಟಾಲ್ಗೆ 6,000 ರೂಪಾಯಿ ಲೆಕ್ಕದಲ್ಲಿ ಕೊಡ್ತಾ ಇದ್ದರು. ಆದರೆ ಈ ಬಾರಿ ಅಡಿಕೆ ರೇಟ್ 48 ಸಾವಿರದ ಆಸುಪಾಸಿನಲ್ಲಿರುವುದರಿಂದ 4,800 ರೂಪಾಯಿಗೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಅಡಿಕೆ ತೋಟದ ಮಾಲೀಕರಿಗೆ ಹಸಿ ಅಡಿಕೆ ಕ್ವಿಂಟಾಲ್ ಮೇಲೆ 1,200 ರೂ.ವರೆಗೆ ನಷ್ಟವಾಗಬಹುದು
ಇದೇ ಟೈಮಲ್ಲಿ, ಚೇಣಿದಾರರಿಗೆ ಇಲ್ಲಿ ಪ್ಲಸ್ ಆಗುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಕಳೆದ ಬಾರಿ ಜನವರಿ ಸಮಯದಲ್ಲಿ ಅಡಿಕೆ ಕ್ವಿಂಟಾಲ್ಗೆ 60 ಸಾವಿರ ರೇಟ್ ಇದ್ದಾಗ, ಅಡಿಕೆ ಚೇಣಿದಾರರೂ ಸಹ ಇನ್ನೂ ರೇಟ್ ಹೆಚ್ಚಾಗಬಹುದು ಎಂದು ಭಾವಿಸಿ ಅಡಿಕೆ ಚೇಣಿ ಮಾಡಿದ್ದರು. ಅಷ್ಟೇ ಅಲ್ಲದೆ ಅನೇಕ ಚೇಣಿದಾರರು ಅಡಿಕೆಯನ್ನು ಸ್ಟಾಕ್ ಇಟ್ಟಿದ್ದರು. ಆದರೆ ಈ ಬಾರಿ ದರ 48 ಸಾವಿರಕ್ಕೆ ಇಳಿದಿದ್ದು, ಚೇಣಿದಾರರನ್ನು ನಷ್ಟಕ್ಕೆ ದೂಡಿದೆ. ಇನ್ನೇನಾದರೂ ಪ್ರಸ್ತುತ ಕ್ವಿಂಟಾಲ್ಗೆ 48 ಸಾವಿರ ಇರುವ ಅಡಿಕೆ ರೇಟ್, ಚೇಣಿ ಪಡೆದ ಮೇಲೆ 60 ಸಾವಿರಕ್ಕೆ ಏರಿದರೆ ಈ ಬಾರಿ ಅಡಿಕೆ ತೋಟದ ಮಾಲೀಕರಿಗೆ ಮೈನಸ್ ಆಗಿ, ಚೇಣಿದಾರರಿಗೆ ಪ್ಲಸ್ ಆಗಲಿದೆ.
ಲಭ್ಯ ಮಾಹಿತಿಯನ್ನಷ್ಟೆ ಇಲ್ಲಿ ನೀಡಿದ್ದೇವೆ, ಅಡಿಕೆ ರೇಟಿನ ವಿಚಾರವಾಗಿ, ಥರಥರ ಸಮಾಲೋಚನೆಗಳು ಬೇರೆ ಬೇರೆ ಕಡೆಗಳಲ್ಲಿ,ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ ಈ ಏಲ್ಲಾ ಚರ್ಚೆಗಳ ಅಂತಿಮ ತೀಮ್! ಅಡಿಕೆಗೆ ಈ ಸಲ ಯಾವಾಗ ರೇಟ್ ಬರುತ್ತೆ ಎನ್ನುವದೇ ಆಗಿದ್ದು, ಈ ನಿಟ್ಟಿನಲ್ಲಿ ನಿಮ್ಮ ಅನುಭವವನ್ನ ಸಹ ದಾಖಲಿಸಿ!ನಮ್ಮೊಂದಿಗೆ ಹಂಚಿಕೊಳ್ಳಿ.
ಬರಹ : ಪ್ರತಾಪ್ ತೀರ್ಥಹಳ್ಳಿ
