ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿನ ಸಂಶೋಧನಾ ಯೋಜನೆಗೆ ಪ್ರೊಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 14 ಸಾಮಾನ್ಯ ವೈದ್ಯಾಧಿಕಾರಿ (ಎಂಬಿಬಿಎಸ್) ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದೆ.
ಕುವೆಂಪು ವಿವಿಯಲ್ಲಿ ಪ್ರೊಜೆಕ್ಟ್ ಅಸಿಸ್ಟೆಂಟ್ ಹುದ್ದೆ
ಈ ಕುರಿತಾಗಿ ವಾರ್ತಾ ಇಲಾಖೆ ನೀಡಿರುವ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ, ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ನಡೆಯುತ್ತಿರುವ ‘ಡೆವಲಪ್ಮೆಂಟ್ ಆಫ್ ಸ್ಟ್ರಿಪ್ ಬೇಸ್ಡ್ ರಾಪಿಡ್ ಅಂಡ್ ಸ್ಪೆಸಿಫಿಕ್ ಡಯಾಗ್ನೋಸ್ಟಿಕ್ ಕಿಟ್ ಫಾರ್ ಡಿಟೆಕ್ಷನ್ ಆಫ್ ಕ್ಯಾಸನೂರ್ ಫಾರೆಸ್ಟ್ ಡಿಸೀಸ್’ ಸಂಶೋಧನಾ ಯೋಜನೆಯಡಿ ಪ್ರೊಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ, ಸ್ವವಿವರ ಹಾಗೂ ಅಗತ್ಯ ಶೈಕ್ಷಣಿಕ ದಾಖಲೆಗಳೊಂದಿಗೆ ಸೆಪ್ಟೆಂಬರ್ 15ರೊಳಗೆ ಪ್ರೊ. ಎನ್. ಬಿ. ತಿಪ್ಪೇಸ್ವಾಮಿ, ಪ್ರಧಾನ ಸಂಶೋಧಕರು, ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ ಇವರಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಇ-ಮೇಲ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿಯನ್ನು [email protected] ವಿಳಾಸಕ್ಕೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಕುವೆಂಪು ವಿಶ್ವವಿದ್ಯಾಲಯದ www.kuvempu.ac.in ವೆಬ್ಸೈಟ್ ಮೂಲಕ ಪಡೆಯಬಹುದು.
14 ವೈದ್ಯಾಧಿಕಾರಿ ಹುದ್ದೆ
ಇನ್ನೊಂದೆಡೆ, ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 14 ಸಾಮಾನ್ಯ ವೈದ್ಯಾಧಿಕಾರಿ (ಎಂಬಿಬಿಎಸ್) ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಲು ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿಗಾಗಿ ಸೆಪ್ಟೆಂಬರ್ 11ರಂದು ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಸಂದರ್ಶನವನ್ನು ಆಯೋಜಿಸಲಾಗಿದೆ.
ಹುದ್ದೆಗಳು ಮತ್ತು ನೇರ ಸಂದರ್ಶನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ವೇಳೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು. ಅಥವಾ ದೂರವಾಣಿ ಸಂಖ್ಯೆ 08182-222382ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಡಿಎಚ್ಒ ಡಾ. ನಟರಾಜ್ ತಿಳಿಸಿದ್ದಾರೆ.
