ಹೊಸ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಂದಿದೆ ಎಂದಾಕ್ಷಣ ಮನಸ್ಸು ಅತ್ತ ಕಡೆ ಹೋಗುತ್ತದೆ. ಹೊಸ ಕ್ಯಾಮೆರಾ, ವೇಗವಾದ ಪ್ರೊಸೆಸರ್, ಹೆಚ್ಚುವರಿ RAM, AI ವೈಶಿಷ್ಟ್ಯಗಳು, ಹೊಸ ವಿನ್ಯಾಸ… ಪ್ರತಿವರ್ಷವೂ ಮೊಬೈಲ್ ಕಂಪನಿಗಳು ಹಳೆಯ ಫೋನ್ ಈಗ ಸಾಕಾಗುವುದಿಲ್ಲ ಎಂಬ ಭಾವನೆ ಮೂಡಿಸುತ್ತವೆ. ಆದರೆ 2026ರಲ್ಲಿ ಹೊಸ ಮೊಬೈಲ್ ಖರೀದಿಸುವ ಮೊದಲು ಒಂದು ಪ್ರಶ್ನೆ ಕೇಳಿಕೊಳ್ಳುವುದು ಒಳ್ಳೆಯದು. ಈಗ ಕೈಯಲ್ಲಿರುವ ಫೋನ್ ನಿಜವಾಗಿಯೂ ಬದಲಾಯಿಸುವಷ್ಟು ಹಳೆಯದಾಗಿದೆಯೇ?
ಈ ಪ್ರಶ್ನೆ ಈಗ ಹೆಚ್ಚು ಮುಖ್ಯವಾಗಿದೆ.
ಕಾರಣ, ಹೊಸ ತಲೆಮಾರಿನ ಫೋನ್ಗಳ ಬೆಲೆ ಏರುತ್ತಿರುವ ವೇಗಕ್ಕೆ ಹೋಲಿಸಿದರೆ ಅವುಗಳಲ್ಲಿ ಸಿಗುತ್ತಿರುವ ನೈಜ ಬದಲಾವಣೆ ಅಷ್ಟೇ ವೇಗವಾಗಿ ಹೆಚ್ಚುತ್ತಿಲ್ಲ. ಹಿಂದಿನ ತಲೆಮಾರಿನ ಉತ್ತಮ ಸ್ಮಾರ್ಟ್ಫೋನ್ ಮತ್ತು ಈ ವರ್ಷದ ಹೊಸ ಮಾದರಿಯನ್ನು ದಿನನಿತ್ಯದ ಸಾಮಾನ್ಯ ಬಳಕೆಯಲ್ಲಿ ಪಕ್ಕಪಕ್ಕ ಇಟ್ಟು ನೋಡಿದರೆ ಬಹುತೇಕ ಬಳಕೆದಾರರಿಗೆ ದೊಡ್ಡ ವ್ಯತ್ಯಾಸವೇ ಕಾಣಿಸದಿರಬಹುದು.
Samsung Galaxy S26 Ultra, Google Pixel ಸರಣಿಯಂತಹ ದುಬಾರಿ ಫೋನ್ಗಳು ತಂತ್ರಜ್ಞಾನದ ದೃಷ್ಟಿಯಿಂದ ಉತ್ತಮವಾಗಿರುವುದರಲ್ಲಿ ಅನುಮಾನವಿಲ್ಲ. ಆದರೆ ಅವುಗಳ ಹಿಂದಿನ ತಲೆಮಾರಿನ ಫೋನ್ಗಳು ಈಗಾಗಲೇ ವೇಗವಾದ ಪ್ರೊಸೆಸರ್, ಉತ್ತಮ ಕ್ಯಾಮೆರಾ, ಉತ್ತಮ ಡಿಸ್ಪ್ಲೇ ಮತ್ತು ದಿನನಿತ್ಯಕ್ಕೆ ಬೇಕಾದಷ್ಟು ಕಾರ್ಯಕ್ಷಮತೆಯನ್ನು ಹೊಂದಿವೆ.
ಹೊಸ ಮಾದರಿ ಸ್ಮಾರ್ಟ್ಫೋನ್ ನಲ್ಲಿ ಸ್ವಲ್ಪ ಹೆಚ್ಚು ವೇಗ, ಕೆಲವು AI ಸೌಲಭ್ಯಗಳು, ಕ್ಯಾಮೆರಾದಲ್ಲಿ ಸಣ್ಣ ಸುಧಾರಣೆ ಅಥವಾ ವಿನ್ಯಾಸದಲ್ಲಿ ಬದಲಾವಣೆ ಇರಬಹುದು. ಆದರೆ ಅದಕ್ಕಾಗಿ ಹಿಂದಿನ ವರ್ಷ ಕೊಳ್ಳಲಾದ ಚೆನ್ನಾಗಿರುವ ಫೋನ್ ಬಿಟ್ಟು ಮತ್ತೊಂದು ದುಬಾರಿ ಸಾಧನಕ್ಕೆ ಹಣ ಹಾಕಬೇಕೇ ಎಂಬುದು ಮುಖ್ಯ ಪ್ರಶ್ನೆ.
ಯುರೋಪಿನ ಮಾರುಕಟ್ಟೆಯಲ್ಲಿ ಕೆಲವು ಉನ್ನತ ದರ್ಜೆಯ ಫೋನ್ಗಳಿಗೆ €1,000ರಿಂದ €2,000ವರೆಗೂ ಬೆಲೆ ಇದೆ. ಹೊಸದು ಎಂಬ ಒಂದೇ ಕಾರಣಕ್ಕಾಗಿ ಅಷ್ಟು ಹಣ ನೀಡಿದರೂ, ಮುಂದಿನ ಕೆಲವು ತಿಂಗಳಲ್ಲಿ ಮತ್ತೊಂದು ಹೊಸ ಮಾದರಿ ಬಿಡುಗಡೆಯಾಗುತ್ತದೆ. ಆಗ ಈಗಿನ ಅತ್ಯಾಧುನಿಕ ಫೋನ್ ಕ್ಷಣಾರ್ಧದಲ್ಲಿ ಹಳೆಯ ತಲೆಮಾರಿನದ್ದಾಗಿ ಕಾಣಲು ಆರಂಭಿಸುತ್ತದೆ. ಈ ಬಾರಿ ಬೆಲೆ ಏರಿಕೆಗೆ ಇನ್ನೊಂದು ಕಾರಣವಿದೆ 2026ರ ಮೊಬೈಲ್ ಮಾರುಕಟ್ಟೆಗೆ ಮೆಮೊರಿ ಚಿಪ್ಗಳ ವೆಚ್ಚ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಫೋನ್ನಲ್ಲಿ ಬಳಸುವ RAM ಮತ್ತು ಸ್ಟೋರೇಜ್ಗೆ ಸಂಬಂಧಿಸಿದ ಮೆಮೊರಿಯ ಬೆಲೆ ಏರಿಕೆಯಾಗಿರುವುದರಿಂದ ಮೊಬೈಲ್ ತಯಾರಿಕಾ ವೆಚ್ಚವೂ ಹೆಚ್ಚುತ್ತಿದೆ
ಇದರ ಪರಿಣಾಮ ಎರಡು ರೀತಿಯಲ್ಲಿ ಬಳಕೆದಾರರ ಮೇಲೆ ಬೀಳಬಹುದು. ಫೋನ್ನ ಅಂತಿಮ ಬೆಲೆ ಹೆಚ್ಚಬಹುದು ಅಥವಾ ಅದೇ ದರದಲ್ಲಿ ನೀಡಲು ಕಂಪನಿಗಳು ಕೆಲವು ಮಾದರಿಗಳಲ್ಲಿ RAM ಅಥವಾ ಇತರ ಹಾರ್ಡ್ವೇರ್ ಪ್ರಮಾಣವನ್ನು ಕಡಿಮೆ ಮಾಡುವ ಪರಿಸ್ಥಿತಿಯೂ ಎದುರಾಗಬಹುದು. ಕೆಲವು ಸಾಧನಗಳಲ್ಲಿ ಮೆಮೊರಿ ವೆಚ್ಚವೇ ಒಟ್ಟು ಹಾರ್ಡ್ವೇರ್ ವೆಚ್ಚದ ದೊಡ್ಡ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಮಾದರಿಯನ್ನು ವಿನ್ಯಾಸಗೊಳಿಸಿದ ಸಮಯದಲ್ಲಿದ್ದ ಸ್ಮಾರ್ಟ್ಫೋನ್ ಮೆಮೊರಿ ಬೆಲೆ ಮತ್ತು ಅದನ್ನು ತಯಾರಿಸುವ ಹಂತದಲ್ಲಿರುವ ಬೆಲೆಯ ನಡುವೆ ದೊಡ್ಡ ವ್ಯತ್ಯಾಸವೂ ಕಂಡುಬಂದಿದೆ.
AI ತಂತ್ರಜ್ಞಾನಕ್ಕೆ ಬೇಕಾಗುತ್ತಿರುವ ಭಾರಿ ಪ್ರಮಾಣದ ಮೆಮೊರಿ ಬೇಡಿಕೆಯೂ ಈ ಪರಿಸ್ಥಿತಿಯನ್ನು ಇನ್ನಷ್ಟು ಅನಿಶ್ಚಿತಗೊಳಿಸಿದೆ.ಕೆಲವು ವರ್ಷಗಳ ಹಿಂದೆ ಮೊಬೈಲ್ ಹಳೆಯದಾಗುವುದಕ್ಕೆ ಪ್ರಮುಖ ಕಾರಣಸಾಫ್ಟ್ವೇರ್ ಆಗಿತ್ತು. ಹೊಸ Android ಆವೃತ್ತಿ ಸಿಗುತ್ತಿರಲಿಲ್ಲ, ಭದ್ರತಾ ಅಪ್ಡೇಟ್ ನಿಲ್ಲುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಪ್ರಮುಖ ಕಂಪನಿಗಳು ಹಲವು ವರ್ಷಗಳ ಸಾಫ್ಟ್ವೇರ್ ಮತ್ತು ಸೆಕ್ಯುರಿಟಿ ಅಪ್ಡೇಟ್ ನೀಡುತ್ತಿವೆ. ಯುರೋಪಿಯನ್ ನಿಯಮಗಳು ಕೂಡ ಹಲವು ಸಾಧನಗಳಿಗೆ ಕನಿಷ್ಠ 5 ವರ್ಷ ಸಾಫ್ಟ್ವೇರ್ ಬೆಂಬಲ ಮತ್ತು 7 ವರ್ಷವರೆಗೆ ಬಿಡಿಭಾಗಗಳ ಲಭ್ಯತೆಯತ್ತ ಉದ್ಯಮವನ್ನು ಒತ್ತಾಯಿಸಿವೆ.
ಅಂದರೆ 2025ರಲ್ಲಿ ಖರೀದಿಸಿದ ಉತ್ತಮ ಫೋನ್ 2026ಕ್ಕೆ ಬಂದ ತಕ್ಷಣ ಹಳೆಯದಾಗುವುದಿಲ್ಲ. ಸರಿಯಾದ ಸ್ಥಿತಿಯಲ್ಲಿದ್ದರೆ ಇನ್ನೂ ಹಲವು ವರ್ಷ ಬಳಸಬಹುದು. ಹೊಸ Android ಆವೃತ್ತಿ, ಭದ್ರತಾ ಪ್ಯಾಚ್ ಮತ್ತು ಅಗತ್ಯ ಆ್ಯಪ್ಗಳು ಸರಿಯಾಗಿ ಸಿಗುತ್ತಿದ್ದರೆ ಕೇವಲ ಹೊಸ ಮಾದರಿ ಬಂದಿದೆ ಎಂಬ ಕಾರಣಕ್ಕೆ ಫೋನ್ ಬದಲಾಯಿಸುವ ಅಗತ್ಯ ಕಡಿಮೆ. ನಮ್ಮ ದಿನನಿತ್ಯದ ಮೊಬೈಲ್ ಬಳಕೆ ಸಾಮಾನ್ಯವಾಗಿ ಕರೆ, WhatsApp, ಸಾಮಾಜಿಕ ಜಾಲತಾಣ, YouTube, ಫೋಟೊ, ವಿಡಿಯೊ, ಬ್ಯಾಂಕಿಂಗ್, ನ್ಯಾವಿಗೇಷನ್ ಮತ್ತು ಕೆಲವು ಆ್ಯಪ್ಗಳ ಸುತ್ತಲೇ ಇರುತ್ತದೆ. ಈಗಾಗಲೇ ಈ ಎಲ್ಲ ಕೆಲಸಗಳನ್ನು ಸರಾಗವಾಗಿ ಮಾಡುತ್ತಿರುವ ಫೋನ್ ಇದ್ದರೆ ಹೊಸ ಪ್ರೊಸೆಸರ್ನ ಹೆಚ್ಚುವರಿ ವೇಗ ಸಾಮಾನ್ಯ ಬಳಕೆಯಲ್ಲಿ ದೊಡ್ಡ ಬದಲಾವಣೆ ತರದೇ ಇರಬಹುದು.
ಹೊಸ ಫೋನ್ಗಳ ಜಾಹೀರಾತಿನಲ್ಲಿ ಅಂಕಿ-ಅಂಶಗಳು ದೊಡ್ಡದಾಗಿ ಕಾಣುತ್ತವೆ. ಸ್ಮಾರ್ಟ್ಫೋನ್ ಪ್ರೊಸೆಸರ್ ಇಷ್ಟು ಶೇಕಡಾ ವೇಗ, AI ಕಾರ್ಯಕ್ಷಮತೆ ಇಷ್ಟು ಹೆಚ್ಚು, ಕ್ಯಾಮೆರಾ ಪ್ರೊಸೆಸಿಂಗ್ ಇನ್ನಷ್ಟು ಉತ್ತಮ ಎಂಬ ಹೋಲಿಕೆಗಳು ಬರುತ್ತವೆ. ಆದರೆ ಕಾಗದದ ಮೇಲಿನ ಸುಧಾರಣೆ ಮತ್ತು ಪ್ರತಿದಿನದ ಬಳಕೆಯಲ್ಲಿನ ಸುಧಾರಣೆ ಒಂದೇ ಆಗಿರಬೇಕೆಂದಿಲ್ಲ. ಅದಕ್ಕಾಗಿಯೇ ಈ ವರ್ಷ ಮೊಬೈಲ್ ಖರೀದಿಸುವ ಮುನ್ನ ಹೊಸ ಫೋನ್ ಏನು ಕೊಡುತ್ತದೆ ಎಂಬುದಕ್ಕಿಂತ ಈಗಿರುವಫೋನ್ನಲ್ಲಿ ನಿಜವಾಗಿಯೂ ಏನು ಕೊರತೆ ಇದೆ ಎಂಬುದನ್ನು ಮೊದಲು ನೋಡಬೇಕು.
ಕೈಯಲ್ಲಿರುವ ಫೋನ್ ಸಂಪೂರ್ಣವಾಗಿ ಹಾಳಾಗಿದ್ದರೆ ಕಾಯಬೇಕಾದ ಅಗತ್ಯವಿಲ್ಲ. ಬ್ಯಾಟರಿ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದ್ದರೆ, ದುರಸ್ತಿ ವೆಚ್ಚ ಅತಿಯಾಗಿ ಹೋಗುತ್ತಿದ್ದರೆ, ಅಗತ್ಯ ಆ್ಯಪ್ಗಳು ಕೆಲಸ ಮಾಡದಿದ್ದರೆ, ಭದ್ರತಾ ಅಪ್ಡೇಟ್ ಸಂಪೂರ್ಣ ನಿಂತಿದ್ದರೆ ಅಥವಾ ಫೋನ್ ದಿನನಿತ್ಯದ ಕೆಲಸಕ್ಕೂ ತೊಂದರೆ ಕೊಡುತ್ತಿದ್ದರೆ ಬದಲಾವಣೆ ಸಮಂಜಸ.ಆದರೆ ಫೋನ್ ಚೆನ್ನಾಗಿ ಕೆಲಸ ಮಾಡುತ್ತಿದೆ, ಬ್ಯಾಟರಿ ತೃಪ್ತಿಕರವಾಗಿದೆ, ಕ್ಯಾಮೆರಾ ಅಗತ್ಯಕ್ಕೆ ಸಾಕಾಗಿದೆ, ಅಪ್ಡೇಟ್ ಬರುತ್ತಿದೆ ಎಂದಾದರೆ ಇನ್ನೂ ಕೆಲವು ಕಾಲ ಬಳಸುವುದು ನಷ್ಟವಲ್ಲ.
ಮೆಮೊರಿ ಮತ್ತು ಸ್ಟೋರೇಜ್ ಬೆಲೆಗಳು ಸ್ಥಿರವಾಗುವವರೆಗೂ ಕಾಯುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮೌಲ್ಯ ಸಿಗುವ ಸಾಧ್ಯತೆಯೂ ಇದೆ. 2027ರಲ್ಲಿ ಪರಿಸ್ಥಿತಿ ಖಂಡಿತ ಸುಧಾರಿಸುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. AI ಕ್ಷೇತ್ರದ ವೇಗದ ಬೆಳವಣಿಗೆಯಿಂದ ಮೆಮೊರಿ ಬೇಡಿಕೆ ಯಾವ ದಿಕ್ಕಿಗೆ ಹೋಗುತ್ತದೆ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಹೊಸ ಫೋನ್ ಖರೀದಿಸುವುದೇ ತಪ್ಪು ಎಂಬುದಲ್ಲ. ಆದರೆ ಪ್ರತಿ ವರ್ಷ ಹೊಸ ಮಾದರಿ ಬಿಡುಗಡೆಯಾಗಿದೆ ಎಂಬ ಕಾರಣಕ್ಕೆ ಮಾತ್ರ ಫೋನ್ ಬದಲಿಸುವ ಪದ್ಧತಿಯನ್ನು ಮತ್ತೊಮ್ಮೆ ಯೋಚಿಸಬೇಕಾದ ಸಮಯ ಬಂದಿದೆ. ಹೊಸ ಫೋನ್ ಕೈಗೆ ಬಂದಾಗ ಅನುಭವವೇ ಬದಲಾಗುವಷ್ಟು ನಿಜವಾದ ಸುಧಾರಣೆ ಇದ್ದರೆ ಹಣ ಖರ್ಚು ಮಾಡುವುದಕ್ಕೆ ಅರ್ಥವಿದೆ. ಕೇವಲ ಮಾದರಿ ಸಂಖ್ಯೆ ಬದಲಾಗಿದೆ, ಒಂದಿಷ್ಟು AI ವೈಶಿಷ್ಟ್ಯ ಬಂದಿದೆ, ಪ್ರೊಸೆಸರ್ ಸ್ವಲ್ಪ ವೇಗವಾಗಿದೆ ಎಂಬ ಕಾರಣಕ್ಕೆ ಚೆನ್ನಾಗಿ ಕೆಲಸ ಮಾಡುತ್ತಿರುವ ಫೋನ್ ಕೈಬಿಡುವುದು 2026ರಲ್ಲಿ ದುಬಾರಿ ನಿರ್ಧಾರವಾಗಬಹುದು.
ಮೂಲ : ಇಂಟರ್ ನೆಟ್ ಮಾಹಿತಿ ಸಂಗ್ರಹದ ಆರ್ಟಿಕಲ್
