ಶಿವಮೊಗ್ಗ: ಕಳೆದ ಸಂಜೆಯಿಂದ ಇದುವರೆಗೂ ಸಹ ಎಲ್ಲೆಡೆ ಮಹಾಭಾರತದ ದುರ್ಯೋಧನದ್ದೇ ಸುದ್ದಿ! ಇದಕ್ಕೆ ಕಾರಣವಾಗಿದ್ದು ವಾರಂಟ್ ಆರೋಪಿ ದಿಲೀಪ್. ಆತನನ್ನು ಪೊಲೀಸರು ಹಿಡಿಯಲು ಹೋದಾಗ ಹಳ್ಳದ ನೀರಿನಲ್ಲಿ ಅಡಗಿ ಕುಳಿತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ ನಂತರ ಪೊಲೀಸರು ವಿಚಾರಿಸಿದಾಗ ಆತ ಹೇಳಿದ ಡೈಲಾಗ್ ಅನ್ನು ಶಿವಮೊಗ್ಗ ಎಸ್‌ಪಿ ನಿಖಿಲ್ ಬಿ. ಅವರು ವಿವರಿಸಿದ್ದಾರೆ. ಈ ಸುದ್ದಿ ನೋಡಿ, ಅದಕ್ಕೂ ಮೊದಲು ಘಟನೆಯ ಹಿನ್ನೆಲೆಯನ್ನು ತಿಳಿದುಕೊಳ್ಳೋಣ.
ಹೌದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭಂಡಾರಹಳ್ಳಿಯ ರೌಡಿಶೀಟರ್ ದಿಲೀಪ್ ಅಲಿಯಾಸ್ ಕುಮಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳ್ಳದ ನೀರಿನಲ್ಲಿ ಅಡಗಿ ಕುಳಿತಿದ್ದ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿದಂತೆ ಒಟ್ಟು 16 ಪ್ರಕರಣಗಳಿದ್ದು, ಆತನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪ್ರಕರಣವೊಂದರಲ್ಲಿ ಈತನ ವಿರುದ್ಧ ನ್ಯಾಯಾಲಯ ಮೂರು ಬಾರಿ ವಾರಂಟ್ ಜಾರಿಗೊಳಿಸಿತ್ತು. ಹೀಗಾಗಿ ದಿಲೀಪ್‌ನನ್ನು ಬಂಧಿಸಲು ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ತೆರಳಿದ್ದರು. ಆದರೆ ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ. ಆದರೆ ಪಟ್ಟು ಬಿಡದ ಪೊಲೀಸರಿಗೆ ಹಳ್ಳದ ಬಳಿ ದಿಲೀಪ್ ಇರುವ ಮಾಹಿತಿ ಲಭ್ಯವಾಗಿದೆ. ಆದರೆ ಹಳ್ಳದ ಬಳಿ ಬಂದು ನೋಡಿದಾಗ, ಪಾಚಿ/ಕುಳೆ ತುಂಬಿ ಅಲ್ಲಿ ಏನೂ ಕಾಣದಂತಾಗಿತ್ತು. ಈ ಮಧ್ಯೆ ಪೊಲೀಸರು ಮನುಷ್ಯ ಓಡಾಡಿದ ಸುಳಿವಿಗಾಗಿ ಹಸಿರು ಕುಳೆಗಳ ನಡುವೆ ಹುಡುಕಾಡಿದ್ದಾರೆ. ಆಗ ಆತ ಹಳ್ಳದ ಕುಳೆಯ ಅಡಿಯಲ್ಲಿ ಅಡಗಿರುವುದು ಕಾಣಿಸಿದೆ. ನೀರಿನಿಂದ ಗುಳ್ಳೆಗಳು ಬರುತ್ತಿರುವುದನ್ನು ನೋಡಿದ ಪೊಲೀಸರು, ಆತ ಅಲ್ಲೇ ಇರುವುದನ್ನು ಖಾತರಿಪಡಿಸಿಕೊಂಡಿದ್ದಾರೆ.
ಕೋರ್ಟ್ ವಾರಂಟ್ ಆಗಿದ್ದರಿಂದ ಆರೋಪಿಯನ್ನು ಬಿಟ್ಟು ಹೋಗುವ ಸೀನೇ ಇರಲಿಲ್ಲ. ಹೀಗಾಗಿ ಸ್ವತಃ ಪೊಲೀಸರೇ ಬಟ್ಟೆಗಳನ್ನು ಕಳಚಿ ನೀರಿಗೆ ಇಳಿದಿದ್ದಾರೆ. ಕೆಟ್ಟ ನೀರಿನ ನಡುವೆ, ವಿಷಜಂತುಗಳ ಭಯದ ನಡುವೆಯೂ ಹಳ್ಳದ ಮಧ್ಯಕ್ಕೆ ತೆರಳಿದ ಪೊಲೀಸರು, ಕುಳೆಯ ನಡುವೆ ಅಡಗಿದ್ದ ಆರೋಪಿಯನ್ನು ವಶಕ್ಕೆ ಪಡೆದು ಅಲ್ಲಿಯೇ ಕೋಳ ಹಾಕಿದ್ದಾರೆ.
ಅಷ್ಟರಲ್ಲಿ ನೀರಿನೊಳಗೆ ಮುಳುಗಿದ್ದ ಆರೋಪಿ ಸುಸ್ತಾಗಿದ್ದ ಹಾಗೂ ಪೊಲೀಸರ ಸಾಹಸಕ್ಕೆ ಆತ ಶರಣಾಗಿದ್ದ. ಪೊಲೀಸರ ಸಹಾಯದಿಂದಲೇ ದಡಕ್ಕೆ ಬಂದ ದಿಲೀಪ್ ಅಲಿಯಾಸ್ ಕುಮಾರನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಠಾಣೆಗೆ ಕರೆದೊಯ್ದು ಕೋರ್ಟ್ ಸುಪರ್ದಿಗೆ ಒಪ್ಪಿಸಿದ್ದಾರೆ.
ದುರ್ಯೋಧನನ ಕಥೆ ಹೇಳಿದ ಆರೋಪಿ:
ಈ ಕುರಿತು ಶಿವಮೊಗ್ಗ ಎಸ್‌ಪಿ ನಿಖಿಲ್ ಬಿ. ಮಾಹಿತಿ ನೀಡಿದ್ದು, “ನ್ಯಾಯಾಲಯ ಮೂರು ಬಾರಿ NBW ವಾರಂಟ್ ಅನ್ನು ಹೊರಡಿಸಿದರೂ ಕೂಡ ದಿಲೀಪ್ ಅನ್ನುವ ಒಬ್ಬ ಆರೋಪಿ, ಅವನು ಮೂರು ಬಾರಿಯೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ವಿಚಾರವನ್ನು ಅರಿತ ನಮ್ಮ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ PSI ಆದ ರಮೇಶ್ ಮತ್ತೆ ಗಂಗಾಧರ್ ಹಾಗೂ ಹಾಲಪ್ಪ, ಅದರ ಜೊತೆಗೆ ಪ್ರಸನ್ನ.ಇಷ್ಟು ಜನ ಇವನನ್ನು ಹುಡುಕಿ, ಹಿಡಿದುಕೊಂಡು ಬಂದಿದ್ದಾರೆ.
ಇವನು ಕೆರೆಯೊಳಗೆ ಅಡಗಿದ್ದ. ಅವನು ಕೆರೆಯೊಳಗಿದ್ದರೂ ಕೂಡ PSI ರಮೇಶ್ ಮತ್ತೆ ಪ್ರಸನ್ನ ಅವರಿಬ್ಬರೂ ಕೆರೆಗೆ ಧುಮುಕಿ, ಅವನನ್ನು ಅಲ್ಲಿಂದ ಎಳೆದುಕೊಂಡು ಬರುವ ವ್ಯವಸ್ಥೆಯನ್ನು ಮಾಡಿದ್ದಾರೆ.
ಅವನಿಗೆ ನೀನು ಯಾಕೆ ಈ ತರ ಮಾಡಿದೆ? ಅಂತ ಕೇಳಿದರೆ, ಅವನು ಮಹಾಭಾರತದಲ್ಲಿ ದುರ್ಯೋಧನನು ನೀರೊಳಗೆ ಕೂತು ಅಡಗಿಕೊಂಡಿದ್ದ, ಅದೇ ರೀತಿ ನಾನು ಮಾಡುವುದಕ್ಕೆ ನೀರೊಳಗೆ ಹೋಗಿ ಬಚ್ಚಿಟ್ಟುಕೊಂಡಿದ್ದೆ’ ಅಂತ ಒಂದು ಕಥೆಯನ್ನು ಹೇಳುತ್ತಾನೆ. ಆದರೂ ಕೂಡ ನಮ್ಮ PSI ಮತ್ತೆ ನಮ್ಮ ಸಿಬ್ಬಂದಿ ಅವರೆಲ್ಲ ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ. ಸ್ವತಃ ನೀರಿಗೆ ಧುಮುಕಿ, ಅಡಗಿದ್ದವನನ್ನು ಹಿಡಿದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಅವನನ್ನು ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಚಾರವಾಗಿ ನಾವು ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಹಾಗೆಯೇ ನಗದು ಬಹುಮಾನವನ್ನು ಕೂಡ ನಾನು ಅವರ PSI ಮತ್ತೆ ಅವರ ಸಿಬ್ಬಂದಿಗೆ ಘೋಷಣೆ ಮಾಡಿದ್ದೇನೆ, ಎಂದು ತಿಳಿಸಿದರು.
