ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep Birthday) ಇಂದು ತಮ್ಮ 54ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ನ ಬಹುನಿರೀಕ್ಷಿತ ಬಿಲ್ಲ ರಂಗ ಬಾಷ (BRB) ಚಿತ್ರದ ರಗಡ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಸದಾ ವಿಭಿನ್ನ ಪ್ರಯೋಗ ಹಾಗೂ ಶೈಲಿಯ ಮೂಲಕ ಅಭಿಮಾನಿಗಳನ್ನು ರಂಜಿಸುವ ಸುದೀಪ್, ಈ ಪೋಸ್ಟರ್ನಲ್ಲಿ ವಿಶಿಷ್ಟ ಅವತಾರದಲ್ಲಿ ಮಿಂಚಿದ್ದಾರೆ. ಹೆಬ್ಬುಲಿ ಶೈಲಿಯ ಕೇಶವಿನ್ಯಾಸದಲ್ಲಿ ಜುಟ್ಟು ಕಟ್ಟಿಕೊಂಡು, ಗಂಭೀರ ನೋಟ ಹಾಗೂ ಸಣ್ಣ ಗಡ್ಡದೊಂದಿಗೆ ಪವರ್ಫುಲ್ ಆಕ್ಷನ್ ಲುಕ್ ನೀಡಿದ್ದಾರೆ.
ಹಿಮದ ವಾತಾವರಣದಲ್ಲಿ ರಗಡ್ ಬೈಕ್ ಏರಿ ನಿಂತಿರುವ ಸುದೀಪ್, ಕಣ್ಣಿಗೆ ಸಾಹಸಮಯ ಗಾಗಲ್ಸ್ ಹಾಗೂ ದಪ್ಪನೆಯ ಜಾಕೆಟ್ ಧರಿಸಿದ್ದಾರೆ. ಹಿನ್ನೆಲೆಯಲ್ಲಿ ಮಂಜಿನಿಂದ ಆವೃತವಾದ ಪರ್ವತಗಳು, ಸ್ಫೋಟಗೊಂಡು ಗಾಳಿಯಲ್ಲಿ ತೂರಿಬರುತ್ತಿರುವ ರೈಲಿನ ಇಂಜಿನ್, ಯುದ್ಧ ವಿಮಾನಗಳು ಹಾಗೂ ಹಾರಾಡುತ್ತಿರುವ ಕಲ್ಲು-ಬಂಡೆಗಳು ಪೋಸ್ಟರ್ನಲ್ಲಿದ್ದು, ಯುದ್ಧದ ಸನ್ನಿವೇಶದ ರೋಮಾಂಚಕಾರಿ ಅನುಭವ ನೀಡುತ್ತವೆ.
2022ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ವಿಕ್ರಾಂತ್ ರೋಣ ಚಿತ್ರದ ನಂತರ ಸುದೀಪ್ ಹಾಗೂ ಅನೂಪ್ ಭಂಡಾರಿ ಜೋಡಿ ಮತ್ತೆ ಒಂದಾಗಿದೆ. ಅಂದು ಮೇಕಿಂಗ್ ಮತ್ತು ನಟನೆಯಿಂದ ಧೂಳೆಬ್ಬಿಸಿದ್ದ ಈ ಕಾಂಬಿನೇಷನ್, ಈಗ BRB ಮೂಲಕ ಮತ್ತಷ್ಟು ದೊಡ್ಡ ಮಟ್ಟದ ಸಿನಿಮಾ ನೀಡಲು ಹೊರಟಿರುವುದು ಪೋಸ್ಟರ್ನಿಂದ ಸ್ಪಷ್ಟವಾಗುತ್ತದೆ.
ತೆಲುಗಿನ ಬ್ಲಾಕ್ಬಸ್ಟರ್ ‘ಹನು-ಮಾನ್’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ (ಪ್ರೈಮ್ಶೋ ಎಂಟರ್ಟೇನ್ಮೆಂಟ್) ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಬಿಗ್ ಬಜೆಟ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 2027ರ ಮಧ್ಯಭಾಗದಲ್ಲಿ ಬೆಳ್ಳಿಪರದೆಯ ಮೇಲೆ ಆರ್ಭಟಿಸಲಿದೆ.
