ಶಿವಮೊಗ್ಗ : ನಮ್ಮವರು ಜನಪ್ರತಿನಿಧಿಗಳೋ ದನ ಪ್ರತಿನಿಧಿಗಳೋ ತಿಳಿಯುತ್ತಿಲ್ಲ, ತೀನಾ ಶ್ರೀನಿವಾಸ್​ 

ಹಂಚಿಕೊಳ್ಳಿ
WhatsApp Facebook X Telegram
Malenadu Farmers Reject Kasturirangan Report
Malenadu Farmers Reject Kasturirangan Report

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಎಂಬುದು ದೇಶೀಯ ಹಾಗೂ ವಿದೇಶಿ ಎನ್‌ಜಿಒಗಳು ಸೇರಿ ನೂರಾರು ಕೋಟಿ ವ್ಯವಹಾರ ನಡೆಸಲು ಹೊರಟಿರುವ, ಕೇಂದ್ರ ಸರ್ಕಾರದಿಂದ ಪ್ರಾಯೋಜಿತವಾಗಿರುವ ಸಂವಿಧಾನ ವಿರೋಧಿ ಯೋಜನೆಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅದನ್ನು ಜಾರಿಗೆ ತರಬಾರದು ಎಂದು ಮಲೆನಾಡು ರೈತ ಹೋರಾಟ ಸಂಘದ ಸಂಚಾಲಕರಾದ ತೀನಾ ಶ್ರೀನಿವಾಸ್ ಆಗ್ರಹಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಇದೀಗ ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ನಾವು ವಿಮಾನದ ಮೇಲಿನಿಂದ ಕೆಳಗೆ ನೋಡಿದಾಗ ಹೇಗೆ ಎಲ್ಲ ಕಡೆ ಹಸಿರು ಕಾಣಿಸುತ್ತದೆಯೋ, ಅದೇ ರೀತಿ ಕೆಲ ತಜ್ಞರು ಉಪಗ್ರಹಗಳ ಮೂಲಕ ಮೇಲಿಂದ ನೋಡಿ, ಇದು ಸಂಪೂರ್ಣ ಅರಣ್ಯ ಪ್ರದೇಶವೆಂದು ಭಾವಿಸಿ ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗಿದ್ದಾರೆ. ಈಗಾಗಲೇ 6ಕ್ಕೂ ಹೆಚ್ಚು ಬಾರಿ ರಾಜ್ಯ ಸರ್ಕಾರ ಇದನ್ನು ವಿರೋಧಿಸಿದ್ದು, ಇದೀಗ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಇದೊಂದು ಸಂಪೂರ್ಣ ಅವೈಜ್ಞಾನಿಕವಾದ ಹಾಗೂ ಕಸದ ಬುಟ್ಟಿಗೆ ಎಸೆಯುವಂತಹ ಯೋಜನೆಯಾಗಿದೆ. ಏಕೆಂದರೆ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರೊಂದಿಗಾಗಲಿ ಅಥವಾ ಗ್ರಾಮ ಪಂಚಾಯಿತಿಗಳಲ್ಲಾಗಲಿ ಚರ್ಚಿಸದೆ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ನಮ್ಮ ಜಿಲ್ಲೆಯ ಹಾಗೂ ಮಲೆನಾಡು ಭಾಗದ ಸಂಸದರು ಮತ್ತು ಶಾಸಕರು ವಿಧಾನಸಭೆಯಲ್ಲಾಗಲಿ, ಲೋಕಸಭೆಯ ಅಧಿವೇಶನದಲ್ಲಾಗಲಿ ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಅವರು ಜನಪ್ರತಿನಿಧಿಗಳೋ ಅಥವಾ ದನ ಪ್ರತಿನಿಧಿಗಳೋ ಎಂದು ಅರ್ಥವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಜಿಲ್ಲೆಯ ಎಂಪಿ ಹಾಗೂ ಎಂಎಲ್‌ಎಗಳು ಜನರೊಂದಿಗೆ ಪ್ರತಿಭಟಿಸುವುದರ ಜೊತೆಗೆ, ಈ ಕುರಿತಾಗಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಅದನ್ನು ಬಿಟ್ಟು ಜಂಟಿ ಸರ್ವೆ ಮಾಡಿಸಿ, ಕೇರಳ ಮಾದರಿಯಲ್ಲಿ ಮಾರ್ಪಾಡು ಮಾಡಿ ಎಂಬ ಮಾತುಗಳನ್ನಾಡಬಾರದು. ಏಕೆಂದರೆ ಕರ್ನಾಟಕದಲ್ಲಿ ಅನೇಕ ಗ್ರಾಮಠಾಣಾ ಪ್ರದೇಶಗಳನ್ನು ಸಹ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಿದ್ದಾರೆ. ಕೇರಳದ ರೀತಿ ಮಾರ್ಪಾಡು ಮಾಡುವ ಬದಲು ರೈತರು ಉಳುಮೆ ಮಾಡುವ ಪ್ರದೇಶಗಳನ್ನು ಹಾಗೂ ಗ್ರಾಮಠಾಣಾ ಪ್ರದೇಶಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದ ಅವರು, ಇದೊಂದು ಕೆಲಸಕ್ಕೆ ಬಾರದ ಯೋಜನೆ ಎಂದು ಅಭಿಪ್ರಾಯಪಟ್ಟರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor