ಬಿಜೆಪಿಯಲ್ಲಿ ಹಿಂದೂ ಸಂಸ್ಕೃತಿ ಬಿಟ್ಟು ತಮಗೆ ಬೇಕಾದವರನ್ನು ಬೆಳೆಸುವ ಕೆಲಸ ನಡೆಯುತ್ತಿದೆ, ಕೆಎಸ್​ ಈಶ್ವರಪ್ಪ

ಹಂಚಿಕೊಳ್ಳಿ
WhatsApp Facebook X Telegram
Eshwarappa Criticizes Caste Politics in Karnataka
Eshwarappa Criticizes Caste Politics in Karnataka

ಮಲೆನಾಡು ಟುಡೆ ಸುದ್ದಿ /  ಶಿವಮೊಗ್ಗ: ಬಿಜೆಪಿಯಲ್ಲಿ ಹಿಂದೂ ಸಂಸ್ಕೃತಿಯನ್ನು ಬಿಟ್ಟು ಜಾತಿ, ಉಪ ಜಾತಿಯ ತಮಗೆ ಬೇಕಾದವರನ್ನು ಬೆಳೆಸುವುದು ನಡೆಯುತ್ತಿದೆ, ಇದನ್ನೆಲ್ಲವನ್ನು ಕೇಂದ್ರದ ನಾಯಕರು ಗಮನಿಸುತ್ತಿದ್ದು, ಮುಂದೊಂದು ದಿನ ಬಿಜೆಪಿ ಸರಿ ಆಗುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು. 

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿಗೆ ವಾಪಸ್ ತೆರಳುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಇದೇ ರೂಪದಲ್ಲಿದ್ದರೆ ಬಹಳಷ್ಟು ಜನ ಬಿಜೆಪಿಗೆ ಬರುವುದಿಲ್ಲ ಎಂದರು. ಅನೇಕ ಹಿರಿಯರು ಬಿಜೆಪಿಯಲ್ಲಿ ಬಹಳ ನೋವಿನಿಂದ ಇದ್ದು, ನಾವು ಕಟ್ಟಿದ ಪಕ್ಷ ಈ ಸ್ಥಿತಿಯಲ್ಲಿದೆಯಲ್ಲಾ ಎಂಬ ಚಿಂತೆಯಲ್ಲಿದ್ದಾರೆ. ಬಿಜೆಪಿ ಇತ್ತೀಚಿನ ಅನೇಕ ಚುನಾವಣೆಗಳಲ್ಲಿ ಸೋತಿದ್ದು, ಎಂ.ಎಲ್.ಸಿ. ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಆಗಿದೆ. ನಮ್ಮೆಲ್ಲಾ ನಾಯಕರಲ್ಲೂ ನೋವಿದ್ದು, ಇತ್ತೀಚೆಗೆ ಸಾಮೂಹಿಕ ನೇತೃತ್ವ ಅನ್ನೋದು ಇಲ್ಲವೇ ಇಲ್ಲವಾಗಿದೆ. ಯಾರೋ ಕೆಲ ವ್ಯಕ್ತಿಗಳು ಜಾತಿ, ಉಪಜಾತಿಯಲ್ಲಿ ಬಿಜೆಪಿಯನ್ನು ಸಿಲುಕಿಸಿದ್ದು, ಇದು ಸರಿಯಾಗಬೇಕೆಂಬ ಅಭಿಲಾಷೆ ಅನೇಕ ನಾಯಕರಲ್ಲಿದೆ ಎಂದರು.

 ಕೆಲವರು ಸ್ಥಾನ, ಮಾನ ಇರುವ ಕಾರಣಕ್ಕೆ ವಿಧಿಯಿಲ್ಲದೇ ಮೌನವಾಗಿದ್ದು, ನಾವು ಕಟ್ಟಿ ಬೆಳೆಸಿದ ಪಕ್ಷದಲ್ಲಿ ಹೀಗಾಯ್ತಲ್ಲಾ ಎಂಬ ಬೇಸರದಲ್ಲಿದ್ದಾರೆ. ಎಲ್ಲರೂ ಇದನ್ನು ಹೇಳದಿದ್ದರೂ ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ. ಬಿಜೆಪಿಯಲ್ಲಿ ಇಂದಲ್ಲ ನಾಳೆ ಸುಧಾರಣೆ ಆಗೇ ಆಗುತ್ತದೆ. ಹಿಂದೂ ಸಂಸ್ಕೃತಿಯನ್ನು ಬಿಟ್ಟು ಜಾತಿ, ಉಪ ಜಾತಿಯ ತಮಗೆ ಬೇಕಾದವರನ್ನು ಬೆಳೆಸುವುದರಿಂದ ಈಗ ಬಿಜೆಪಿ ನಶಿಸಿ ಹೋಗುತ್ತಿದ್ದು, ಇದನ್ನು ಕೇಂದ್ರದ ನಾಯಕರು ಗಮನಿಸಿ ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯಲ್ಲಿ ನಡೆದುಕೊಂಡು ಬಂದಿರುವ ಗೊಂದಲಗಳನ್ನು ವಿರೋಧಿಸಿಯೇ ನಾನು ಹೊರಗೆ ಬಂದಿದ್ದು, ನಾನೇನು ಪರ್ಮನೆಂಟ್ ಆಗಿ ಬಿಜೆಪಿಯಿಂದ ಹೊರಗಿಲ್ಲ. ಕುತಂತ್ರ ಹಾಗೂ ಷಡ್ಯಂತ್ರದಿಂದಾಗಿ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲದೆ, ಭಯ ಮತ್ತು ನೋವಿನಿಂದ ಕೆಲವರು ದೂರ ಉಳಿದಿದ್ದಾರೆ. ನನ್ನ ಕುತ್ತಿಗೆ ಕೊಯ್ದರೂ ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗುವುದಿಲ್ಲ, ಇದನ್ನು ನೂರು ಬಾರಿ ಹೇಳಿದ್ದೇನೆ. ನನ್ನ ಹೃದಯದಲ್ಲೇ ಕಮಲ, ಬಿಜೆಪಿ ಹಾಗೂ ಮೋದಿ ಇದ್ದಾರೆ ಎಂದು ಅವರು ತಿಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor