ಮಲೆನಾಡು ಟುಡೆ ಸುದ್ದಿ ಶಿವಮೊಗ್ಗ: ನಗರದಲ್ಲಿ ಸಾರ್ವಜನಿಕರಿಗೆ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಪರಿಶೀಲಿಸಲು ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ನಿನ್ನೆ ದಿಢೀರ್ ದಾಳಿ ನಡೆಸಿದೆ. ತಹಶೀಲ್ದಾರ್ ರಾಜೀವ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ನಗರದ ಪ್ರಮುಖ ಬೇಕರಿಗಳು, ಹೋಟೆಲ್‌ಗಳು ಹಾಗೂ ಕೆಲವು ಸರ್ಕಾರಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಅಡುಗೆ ಮನೆ, ಆಹಾರ ಪದಾರ್ಥ ತಯಾರಿಸುವ ಸ್ಥಳ ಹಾಗೂ ಸಂಗ್ರಹಣಾ ಕೊಠಡಿಗಳನ್ನು ಪರಿಶೀಲಿಸಿತು. ಸಾರ್ವಜನಿಕರ ಆರೋಗ್ಯದ ಜೊತೆ ಯಾವುದೇ ಕಾರಣಕ್ಕೂ ಚೆಲ್ಲಾಟವಾಡಬಾರದು, ಕಡ್ಡಾಯವಾಗಿ ಸೇವನೆಗೆ ಯೋಗ್ಯವಾದ ಶುದ್ಧ ಆಹಾರವನ್ನಷ್ಟೇ ತಯಾರಿಸಿ ಮಾರಾಟ ಮಾಡಬೇಕು ಎಂದು ಎಸಿ ಡಾ. ಮೈತ್ರಿ ಸ್ಥಳದಲ್ಲಿದ್ದ ಮಾಲೀಕರಿಗೆ ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಪರಿಶೀಲನೆ ವೇಳೆ ಕಂಡುಬಂದ ಲೋಪದೋಷಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅಧಿಕಾರಿಗಳು, ಅವಧಿ ಮೀರಿದ ಮತ್ತು ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ತಕ್ಷಣವೇ ಪ್ರತ್ಯೇಕಿಸಿ ವಿಲೇವಾರಿ ಮಾಡುವಂತೆ ಸೂಚಿಸಿದರು. ಅಲ್ಲದೆ, ತಪಾಸಣೆ ವೇಳೆ ಕಂಡುಬಂದ ಕುಂದುಕೊರತೆಗಳನ್ನು ಸರಿಪಡಿಸಿಕೊಳ್ಳಲು۰ ದಿನಗಳ ಗಡುವು ನೀಡಲಾಗಿದೆ. ನಿಗದಿತ ಸಮಯದೊಳಗೆ ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸದಿದ್ದರೆ, ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಹೋಟೆಲ್ ಮಾಲೀಕರು ಹಾಗೂ ಇಲಾಖೆಯ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
