ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಇಸ್ಲಾಂ ಧರ್ಮವೇ ಶ್ರೇಷ್ಠ ಧರ್ಮ, ನನಗೆ ಹಜ್ ಯಾತ್ರೆಗೆ ಹೋಗುವ ಆಸೆ ಇದೆ ಎಂಬ ಹೇಳಿಕೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯ ಬೆನ್ನಲ್ಲೇ ಪ್ರತಿಕ್ರಿಯಿಸಿದ ಶಾಸಕ ಎಸ್. ಎನ್. ಚನ್ನಬಸಪ್ಪ, ಬಸವರಾಜ ರಾಯರೆಡ್ಡಿಯವರು ಹಜ್‌ಗಾದರೂ ಹೋಗಲಿ, ಜೆರುಸಲೇಂಗಾದರೂ ಹೋಗಲಿ ಅದನ್ನು ಜನರಿಗೆ ಹೇಳಿ ಹೋಗುವ ಅಗತ್ಯವೇನಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ರಾಯರೆಡ್ಡಿ ಅವರ ಬುದ್ಧಿಗೆ ಏನು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಒಬ್ಬೊಬ್ಬ ನಾಯಕರು ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. ಯಾರನ್ನು ಮೆಚ್ಚಿಸಲು ಈ ರೀತಿ ಮಾತನಾಡುತ್ತಾರೋ ಗೊತ್ತಿಲ್ಲ. ಅವರು ಹಜ್‌ಗಾದರೂ ಹೋಗಲಿ, ಜೆರುಸಲೇಂಗಾದರೂ ಹೋಗಲಿ, ಅದು ಅವರ ವೈಯಕ್ತಿಕ ವಿಚಾರ. ಅವರೇನು ದೇಶ ಕಾಯಲು ಯುದ್ಧಕ್ಕೆ ಹೋಗುತ್ತಿಲ್ಲವಲ್ಲ, ಹಾಗಿದ್ದ ಮೇಲೆ ಅದನ್ನು ಜನರಿಗೆ ಹೇಳಿ ಹೋಗುವ ಅಗತ್ಯವೇನಿದೆ? ಎಂದು ವಾಗ್ದಾಳಿ ನಡೆಸಿದರು.
ಇದು ಅತ್ಯಂತ ಲಜ್ಜೆಗೆಟ್ಟ ಹೇಳಿಕೆಯಾಗಿದೆ. ಉನ್ನತ ಸ್ಥಾನದಲ್ಲಿರುವ ರಾಜಕಾರಣಿಗಳು ಮುಸ್ಲಿಮರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಅವರ ವೈಯಕ್ತಿಕ ವಿಚಾರ. ಕಾಂಗ್ರೆಸ್ ನಾಯಕರು ಬೇಕಿದ್ದರೆ ಮೆಕ್ಕಾ-ಮದೀನಕ್ಕೆ ಹೋಗಲಿ, ಆದರೆ ರಾಮಮಂದಿರ ಅಥವಾ ಮಥುರಾಗೆ ಹೋಗಿ ಎಂದು ಜನರಿಗೆ ಹೇಳಲು ಅವರು ಇಷ್ಟಪಡುವುದಿಲ್ಲ. ಯಾರು ಯಾವ ಧರ್ಮದಲ್ಲಿ ಹುಟ್ಟಿರುತ್ತಾರೋ ಅವರು ಆ ಧರ್ಮದ ಪವಿತ್ರ ಸ್ಥಳಗಳಿಗೆ ಹೋಗುತ್ತಾರೆ. ಆದರೆ, ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ವ್ಯಕ್ತಿಗಳನ್ನು ನಾವು ಸಹಿಸುವುದಿಲ್ಲ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿಯ ಹೇಳಿಕೆ ನೀಡುವುದು ಅವರ ನಾಯಕತ್ವಕ್ಕೆ ಶೋಭೆ ತರುವುದಿಲ್ಲ. ಕಾಂಗ್ರೆಸಿಗರು ತಮ್ಮನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಈಗ ಮುಸ್ಲಿಮರಿಗೂ ಅರ್ಥವಾಗುತ್ತಿದೆ ಎಂದರು.
ಇದೇ ವೇಳೆ ಕೆಪಿಎಸ್‌ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಜ್ಞಾನೇಂದ್ರ ಅವರ ಬಂಧನದ ಕುರಿತು ಮಾತನಾಡಿದ ಚನ್ನಬಸಪ್ಪ, ಈ ಹಿಂದೆ ಕೆಪಿಎಸ್‌ಸಿ ಅಕ್ರಮದ ಕುರಿತು ಚರ್ಚೆ ಮಾಡಲು ಸರ್ಕಾರ ಅವಕಾಶ ನೀಡಿರಲಿಲ್ಲ. ಅಕ್ರಮವನ್ನು ಮುಚ್ಚಿಹಾಕುವ ಹಾಗೂ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆದಿತ್ತು. ಜ್ಞಾನೇಂದ್ರ ಅವರನ್ನು ಈ ಹಿಂದೆ ಬಚ್ಚಿಡಲಾಗಿತ್ತು. ಆದರೆ, ವಿದ್ಯಾರ್ಥಿಗಳು ನಡೆಸಿದ ತೀವ್ರ ಹೋರಾಟದ ಪರಿಣಾಮವಾಗಿ ತನಿಖೆಗೆ ಚುರುಕು ದೊರೆತು, ಇದೀಗ ಆತನ ಬಂಧನವಾಗಿದೆ. ಜ್ಞಾನೇಂದ್ರ ಜೈಲು ಪಾಲಾಗಿದ್ದು, ಈ ಅಕ್ರಮಕ್ಕೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಶಿಕ್ಷೆಯಾಗಲಿದೆ,ಎಂದು ಎಚ್ಚರಿಸಿದರು.
