ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯಲ್ಲಿ (Karnataka Youth Congress) ಸಿ.ಜಿ. ಮಧುಸೂದನ್ ಅವರಿಗೆ ಮಹತ್ವದ ರಾಜ್ಯ ಮಟ್ಟದ ಜವಾಬ್ದಾರಿ ನೀಡಲಾಗಿದ್ದು, ಭಾರತ ಜೋಡೋ ಯುವ ಸಂಘ ರಚನೆ, ಯುವಕರ ನೋಂದಣಿ ಹಾಗೂ ಸಂಘಟನೆ ವಿಸ್ತರಣೆಯ ಕಾರ್ಯದಲ್ಲಿ 11 ಜಿಲ್ಲೆಗಳ ಹೊಣೆಗಾರಿಕೆ ವಹಿಸಲಾಗಿದೆ.
ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ನಿರ್ದೇಶನದಂತೆ ಮತ್ತು ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ನಿಗಮ್ ಭಂಡಾರಿ ಅವರ ಅನುಮೋದನೆಯೊಂದಿಗೆ ಈ ನೇಮಕಾತಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ 25/08/2026ರಂದು ಹೊರಡಿಸಿರುವ ಆದೇಶದಲ್ಲಿ ನಾಗೇಶ್ ಕರಿಯಪ್ಪ, ಸಿ.ಜಿ. ಮಧುಸೂದನ್ ಮತ್ತು ಸಿದ್ದು ಹಾಲೇಗೌಡ ಅವರನ್ನು ರಾಜ್ಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ರಾಜ್ಯಾದ್ಯಂತ ಭಾರತ ಜೋಡೋ ಯುವ ಸಂಘ ರಚಿಸುವುದು, ಸಂಘಟನೆಗೆ ಯುವಕರನ್ನು ನೋಂದಾಯಿಸುವುದು ಹಾಗೂ ಸಂಬಂಧಿಸಿದ ಜಿಲ್ಲೆಗಳಿಗೆ ಭೇಟಿ ನೀಡುವ ಜವಾಬ್ದಾರಿಯನ್ನು ಈ ಮೂವರಿಗೆ ವಹಿಸಲಾಗಿದೆ. ಜೊತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಬಂಧಿಸಿದ ಕಾರ್ಯಕ್ರಮಗಳನ್ನು ಚುರುಕುಗೊಳಿಸುವುದು, ಯುವಕರನ್ನು ಒಗ್ಗೂಡಿಸುವುದು ಮತ್ತು ಸಂಘಟನಾ ಚಟುವಟಿಕೆಗಳನ್ನು ಬಲಪಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಇನ್ನೂ ಶಿವಮೊಗ್ಗ ಯೂತ್ ಕಾಂಗ್ರೆಸ್ನ ಸಿ.ಜಿ. ಮಧುಸೂದನ್ರಿಗೆ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಧಾರವಾಡ ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿತ್ರದುರ್ಗ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ನಾಗೇಶ್ ಕರಿಯಪ್ಪ ಅವರಿಗೆ ಮೈಸೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ನಗರ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿದೆ. ಸಿದ್ದು ಹಾಲೇಗೌಡ ಅವರಿಗೆ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ, ವಿಜಯನಗರ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಹಾವೇರಿ ಮತ್ತು ಗದಗ ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ.
