ಮಲೆನಾಡು ಟುಡೇ ನ್ಯೂಸ್/ ರಿಪ್ಪನ್‌ಪೇಟೆ, ಹಬ್ಬದ ಭದ್ರತೆಯ ನಿಮಿತ್ತ ಕಾವಲು ಕಾಯುತ್ತಿದ್ದ ರಿಪ್ಪನ್‌ಪೇಟೆ ಠಾಣೆಯ ಗಸ್ತು ವಾಹನಕ್ಕೆ ಅಪರಿಚಿತ ಕಾರೊಂದು ಹಿಂಬದಿಯಿಂದ ಬಂದು ಜೋರಾಗಿ ಢಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ಕಳೆದುಕೊಂಡ ಜೀಪ್ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ ಘಟನೆ ಹಿರೇಜೇನಿ ಸಮೀಪ ಜರುಗಿದೆ.
ಅಪಘಾತ ನಡೆದದ್ದು ಹೇಗೆ?
ಈದ್ ಮಿಲಾದ್ ಆಚರಣೆಯ ಹಿನ್ನೆಲೆಯಲ್ಲಿ ಪಿಎಸ್‌ಐ ರಾಜುರೆಡ್ಡಿ, ಸಿಬ್ಬಂದಿ ವಿಶ್ವನಾಥ್ ಮತ್ತು ಚಾಲಕ ಅವಿನಾಶ್ ಅವರು ಬಟ್ಟೆಮಲ್ಲಪ್ಪ ಹಾಗೂ ಕೋಡೂರು ಭಾಗದಲ್ಲಿ ಗಸ್ತು ಕಾಯುವಿಕೆ ಮುಗಿಸಿ ಠಾಣೆಗೆ ಮರಳುತ್ತಿದ್ದರು. ರಾತ್ರಿ ಸರಿಸುಮಾರು 2:30ರ ವೇಳೆಗೆ ಹಿರೇಜೇನಿ ಬಳಿ ಈ ಅನಾಹುತ ನಡೆದಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಎಲ್ಲರೂ ಸೀಟ್‌ಬೆಲ್ಟ್ ಧರಿಸಿದ್ದರಿಂದ ಹಾಗೂ ಕ್ಷಣಮಾತ್ರದಲ್ಲಿ ಏರ್‌ಬ್ಯಾಗ್ ತೆರೆದುಕೊಂಡಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಬಿಟ್ಟು ತಲೆಮರೆಸಿಕೊಂಡ ಸವಾರ, ಶಾಸಕರ ಭೇಟಿ
ಜೀಪ್‌ಗೆ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ ಚಾಲಕ, ಬೆಳಗಿನ ಜಾವ ಕರಿಗೆರಸು ಸಮೀಪ ತಾನು ಚಲಾಯಿಸುತ್ತಿದ್ದ ಫೋರ್ಡ್ ಈಕೋ ಸ್ಪೋರ್ಟ್ಸ್ ಕಾರನ್ನು ರಸ್ತೆ ಬದಿಯಲ್ಲೇ ಬಿಟ್ಟು ಕಾಲ್ಕಿತ್ತಿರುವುದು ಪತ್ತೆಯಾಗಿದೆ. ಅಪಘಾತದ ಸಂಗತಿ ತಿಳಿಯುತ್ತಿದ್ದಂತೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಗಾಯಗೊಂಡ ಪಿಎಸ್‌ಐ ಹಾಗೂ ಸಿಬ್ಬಂದಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಘಟನೆಗೆ ಸಂಬಂಧಿಸಿ ರಿಪ್ಪನ್‌ಪೇಟೆ ಠಾಣೆಯಲ್ಲಿ ಕೇಸ್ ಜಾರಿಯಾಗಿದ್ದು, ತನಿಖೆ ಚುರುಕುಗೊಂಡಿದೆ.
