ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಚಿತ್ರದುರ್ಗ ಮೂಲದ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಶಿವಮೊಗ್ಗದ (in Shivamogga) ರೈಲ್ವೆ ಸೇತುವೆಯಿಂದ ಹೊಳೆಗೆ ಹಾರಿದ ಘಟನೆ ಇಂದು ಸೋಮವಾರ ಸಂಜೆ ವರದಿಯಾಗಿದೆ. ಘಟನೆಯಲ್ಲಿ ಮಹಿಳೆ ಹಾಗೂ 11 ತಿಂಗಳ ಗಂಡು ಮಗುವನ್ನು ಸ್ಥಳೀಯರು ರಕ್ಷಿಸಿದ್ದು, 6 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಾಳೆ ಮುಂದುವರಿಯಲಿದೆ.
ಸಂಜೆ ಸುಮಾರು 6.30ರ ವೇಳೆಗೆ ಶಿವಮೊಗ್ಗದ ಅರಕೇಶ್ವರ ದೇವಾಲಯದ ಸಮೀಪದ ರೈಲ್ವೆ ಸೇತುವೆ ಮೇಲೆ ಮೂವರು ಮಕ್ಕಳೊಂದಿಗೆ ನಡೆದುಕೊಂಡು ಹೋದ ಮಹಿಳೆ, ಸೇತುವೆಯಿಂದ ಮಕ್ಕಳೊಂದಿಗೆ ಹೊಳೆಗೆ ಹಾರಿದ್ದಾರೆ. ಇದನ್ನ ಸಾರ್ವಜನಿಕರು ಗಮನಿಸಿ ಕೂಗುವಷ್ಟರಲ್ಲಿ ಮಹಿಳೆ ಹೊಳೆಗೆ ಹಾರಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನೂ ಅಲ್ಲಿಯೇ ಇನ್ನೊಂದು ಬದಿಯಲ್ಲಿದ್ದ ದಾದಾಪೀರ್ ಹಾಗೂ ನವೀನ್ ಎಂಬವರು ತಕ್ಷಣ ಹೊಳೆಗೆ ಹಾರಿ ಮಹಿಳೆ ಹಾಗೂ ಒಂದು ಮಗುವನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಗು 11 ತಿಂಗಳ ಗಂಡು ಮಗು ಎಂದು ತಿಳಿದುಬಂದಿದೆ.
ನೀರಿನ ರಭಸ ಹೆಚ್ಚಿದ್ದರಿಂದ ಇನ್ನಿಬ್ಬರು ಮಕ್ಕಳ ಸುಳಿವು ಸಿಕ್ಕಿಲ್ಲ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರು ಆಗಮಿಸಿ ಹುಡುಕಾಟ ಆರಂಭಿಸಿದ್ದರು. ಆದರೆ ಅಷ್ಟರಲ್ಲಿ ಪೂರ್ಣ ಕತ್ತಲಾಗಿದ್ದರಿಂದ ಹುಡುಕಾಟ ಸಾಧ್ಯವಾಗಲಿಲ್ಲ. ಹೀಗಾಗಿ ನಾಳೆಗೆ ಶೋಧ ಕಾರ್ಯಾಚರಣೆ ಶಿಫ್ಟ್ ಮಾಡಲಾಗಿದೆ. ಈ ಬಗ್ಗೆ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಮೂಲಗಳು ದೃಢಪಡಿಸಿವೆ.
ಇನ್ನೂ ಮಹಿಳೆಯನ್ನು ಚಿತ್ರದುರ್ಗದ ಕರುಬರಹಟ್ಟಿ ನಿವಾಸಿ 24 ವರ್ಷದ ಭವಾನಿ ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿಯೊಂದಿಗೆ ಸವಳಂಗದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಭವಾನಿ ಅವರೊಂದಿಗೆ ಹೊಳೆಗೆ ಹಾರಿದ್ದ 6 ವರ್ಷದ ಹಾಗೂ 4 ವರ್ಷದ ಇಬ್ಬರು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದು, ನಾಳೆ ಅವರ ಬಗ್ಗೆ ಮಾಹಿತಿ ಸಿಗಬೇಕಿದೆ.
