ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗಾಗಿ ಸರ್ಕಾರ ಹಾಗೂ ಕೆಪಿಸಿಎಲ್ ಸಂಸ್ಥೆಗಳು ಕೈಜೋಡಿಸಿ ನಿಯಾಸ್ ಸಂಸ್ಥೆಯಿಂದ ಸುಳ್ಳು ವರದಿ ಕೊಡಿಸಿವೆ. ಯಾವುದೇ ಕಾರಣಕ್ಕೂ ಶರಾವತಿ ಮತ್ತು ಬೇಸೂರು ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಮಲೆನಾಡಿನಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪರಿಸರಕ್ಕಾಗಿ ನಾವು ಹಾಗೂ ರಾಷ್ಟ್ರಭಕ್ತರ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಜಾರ್ಜ್ ಅವರ ಪ್ರೇರಣೆಯಿಂದಲೇ ನಿಯಾಸ್ ಸಂಸ್ಥೆ ಈ ರೀತಿಯ ಸುಳ್ಳು ವರದಿಯನ್ನು ನೀಡಿದೆ. ಇದೊಂದು ವ್ಯವಸ್ಥಿತ ಕುತಂತ್ರವಾಗಿದ್ದು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಜಾರಿಗೆ ಬರಲು ಬಿಡುವುದಿಲ್ಲ. ಈ ಜನಾಂದೋಲನಕ್ಕೆ ಈಗಾಗಲೇ ಮಲೆನಾಡಿನ ಪೂಜ್ಯ ಸ್ವಾಮೀಜಿಗಳು, ನಾಗರಿಕರು ಹಾಗೂ ಪರಿಸರಾಸಕ್ತರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.
Shivamogga ನಿಯಾಸ್ ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಯಲ್ಲ: ಶ್ರೀಕಾಂತ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಮುಖರಾದ ಶ್ರೀಕಾಂತ್, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಹರಡುತ್ತಿರುವುದು ಸುಳ್ಳು ಸುದ್ದಿ. ಇದಕ್ಕಾಗಿ ಬಳಸಿಕೊಂಡಿರುವ ನಿಯಾಸ್ ಸಂಸ್ಥೆಯು ಸರ್ಕಾರದಿಂದ ಯಾವುದೇ ಅಧಿಕೃತ ಮಾನ್ಯತೆ ಪಡೆದ ಸಂಸ್ಥೆಯಲ್ಲ. ಇದು ಕೇವಲ ಐಐಎಸ್ಸಿ ಕ್ಯಾಂಪಸ್ ವಿಳಾಸದಲ್ಲಿದೆ ಅಷ್ಟೇ. ಈ ಹಿಂದೆ ನಮ್ಮ ಭಾಗದ ತಳಮಟ್ಟದ ಸರ್ಕಾರಿ ಅಧಿಕಾರಿಗಳೇ ಸ್ಥಳ ಪರಿಶೀಲನೆ ನಡೆಸಿ, ಈ ಯೋಜನೆ ಸೂಕ್ತವಲ್ಲ ಎಂದು ವರದಿ ಕೊಟ್ಟಿದ್ದಾರೆ. ಆದರೆ, ಕೆಪಿಸಿಎಲ್ ಅಧಿಕಾರಿಗಳು ನಿಯಾಸ್ ಸಂಸ್ಥೆಯ ಹಿಂದೆ ಬಿದ್ದು ತಮ್ಮ ಅನುಕೂಲಕ್ಕೆ ತಕ್ಕಂತೆ ವರದಿ ಸಿದ್ಧಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಜೂನ್ 23 ರಂದು ನಿಯಾಸ್ ನೀಡಿದ 175 ಪುಟಗಳ ಸುದೀರ್ಘ ತಾಂತ್ರಿಕ ವರದಿಯನ್ನು ಕೆಪಿಸಿ ಕೇವಲ ಒಂದೇ ದಿನದಲ್ಲಿ ಓದಿ ಮುಗಿಸಿ, ಮರುದಿನವೇ (ಜೂನ್ 24) ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಆದರೆ, ಈವರೆಗೆ ಯೋಜನೆಗೆ ಯಾವುದೇ ಕೇಂದ್ರ ಸಂಸ್ಥೆಗಳು ಒಪ್ಪಿಗೆ ನೀಡಿಲ್ಲ ಎಂದು ನ್ಯಾಯಾಲಯದ ಮುಂದೆಯೇ ಸ್ಪಷ್ಟವಾಗಿದೆ. ಇವೆಲ್ಲವೂ ನ್ಯಾಯಾಲಯವನ್ನು ಮತ್ತು ಜನರನ್ನು ದಾರಿ ತಪ್ಪಿಸುವ ಕೆಪಿಸಿ ಕುತಂತ್ರವಾಗಿದೆ ಎಂದು ಅವರು ಕಿಡಿಕಾರಿದರು.
Shivamogga ಪರಿಸರ ನಾಶದ ಬಗ್ಗೆ ಮೌನ ವಹಿಸಿದ ವರದಿ: ಪ್ರೊ. ಬಿ.ಎಂ.ಕುಮಾರಸ್ವಾಮಿ ಚಾಟಿ
ಹಿರಿಯ ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ನಿಯಾಸ್ ಸಂಸ್ಥೆಯು ತನ್ನ ವರದಿಯನ್ನು ಕೆಪಿಸಿ ಅಧ್ಯಕ್ಷ ಗೌರವ್ ಗುಪ್ತಾ ಅವರಿಗೆ ಸಲ್ಲಿಕೆ ಮಾಡಿದೆ. ಈ ವರದಿ ಕೆಪಿಸಿ ಬಯಸಿದಂತೆ ಯೋಜನೆಯಿಂದ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ ಎಂದು ಹೇಳಿದೆ. ಆದರೆ, ಯೋಜನೆಗಾಗಿ ಕಡಿಯಲಾಗುವ ಲಕ್ಷಾಂತರ ಮರಗಳು ಹಾಗೂ ಜೀವವೈವಿಧ್ಯದ ನಾಶದ ಬಗ್ಗೆ ಇದರಲ್ಲಿ ಉಲ್ಲೇಖವೇ ಇಲ್ಲ. ದಟ್ಟ ಶರಾವತಿ ವನ್ಯಜೀವಿಧಾಮದ ಒಳಗೆ ಸುರಂಗ ಮಾರ್ಗ ಕೊರೆದು, ಪರಿಸರ ಹಾಳುಮಾಡಿ ವಿದ್ಯುತ್ ಸಂಗ್ರಹಣೆ ಮಾಡುವ ಇಂತಹ ಬೇಜವಾಬ್ದಾರಿಯುತ ಯೋಜನೆ ಬೇಡ. ಕೆಪಿಸಿ ಧೈರ್ಯವಿದ್ದರೆ ಈ ವರದಿಯನ್ನು ತನ್ನ ವೆಬ್ಸೈಟ್ನಲ್ಲಿ ತಕ್ಷಣ ಪ್ರಕಟಿಸಲಿ ಎಂದರು
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
