ಶಿವಮೊಗ್ಗ : ಗಣೇಶ ಚತುರ್ಥಿ ಹಬ್ಬದಂದು ಗ್ರಾಹಕರೊಬ್ಬರಿಗೆ ವೆಜ್ ಬರ್ಗರ್ ಬದಲಿಗೆ ನಾನ್ವೆಜ್ ಬರ್ಗರ್ ನೀಡಿದ ಖಾಸಗಿ ಫುಡ್ ಡಿಲವೆರಿ ಕಂಪನಿಯೊಂದಕ್ಕೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೀತು, ಇ-ಪೇಪರ್ ಓದಿ
Shivamogga Consumer Court ಘಟನೆಯ ಹಿನ್ನೆಲೆ
ಕಳೆದ 2025ರ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬದ ದಿನದಂದು ಶಿವಮೊಗ್ಗದ ನಿವಾಸಿಯಾದ ನಂದೀಶ್ ಎಂಬುವವರು ಪ್ರಸಿದ್ಧ ಖಾಸಗಿ ಫುಡ್ ಡಿಲಿವರಿ ಆ್ಯಪ್ ಮೂಲಕ 313.15 ಪಾವತಿಸಿ ವೆಜ್ ಬರ್ಗರ್ ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ನಾನ್-ವೆಜ್ ಬರ್ಗರ್ ತಲುಪಿಸಲಾಗಿತ್ತು. ಈ ಬಗ್ಗೆ ಅವರು ತಕ್ಷಣವೇ ಆ್ಯಪ್‌ನಲ್ಲಿ ದೂರು ದಾಖಲಿಸಿದಾಗ, ಸಂಸ್ಥೆಯು ಬರ್ಗರ್‌ನ ಮೊತ್ತವನ್ನು ಅವರ ಖಾತೆಗೆ ರಿಫಂಡ್ ಮಾಡಿ ಕೈತೊಳೆದುಕೊಂಡಿತ್ತು.
ಆದರೆ, ಪವಿತ್ರವಾದ ಗಣೇಶ ಹಬ್ಬದ ಸಂದರ್ಭದಲ್ಲಿ ಮನೆಯೊಳಗೆ ಮಾಂಸಾಹಾರಿ ಆಹಾರ ತಂದು ತಲುಪಿಸುವ ಮೂಲಕ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ನಂದೀಶ್ ಆಕ್ರೋಶಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ವಕೀಲರ ಮೂಲಕ ಖಾಸಗಿ ಫುಡ್ ಡಿಲಿವರಿ ಸಂಸ್ಥೆಯ ಸಿ.ಇ.ಒ (ಗುರಗಾಂವ್, ಹರಿಯಾಣ), ಜೋನಲ್ ಹೆಡ್ (ಬೆಂಗಳೂರು) ಹಾಗೂ ಶಿವಮೊಗ್ಗದ ಫೈವ್ ಸ್ಟಾರ್ ಕಾಂಪ್ಲೆಕ್ಸ್‌ನ ಹೋಟೆಲ್ ಮಾಲೀಕರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರನ್ನು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆ ವೇಳೆ ಖಾಸಗಿ ಫುಡ್ ಡಿಲಿವರಿ ಸಂಸ್ಥೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿತು. ತಮ್ಮದು ಕೇವಲ ಆರ್ಡರ್ ತೆಗೆದುಕೊಳ್ಳುವ ಆನ್‌ಲೈನ್ ವೇದಿಕೆಯಷ್ಟೇ . ಗ್ರಾಹಕರು ನೇರವಾಗಿ ಹೋಟೆಲ್‌ಗೆ ಆರ್ಡರ್ ಮಾಡಿರುತ್ತಾರೆ. ಇದರಲ್ಲಿ ನಮ್ಮ ಯಾವುದೇ ಲೋಪ ಅಥವಾ ಸೇವಾನ್ಯೂನತೆ ಇರುವುದಿಲ್ಲ ಎಂದು ಕೋರ್ಟ್‌ನಲ್ಲಿ ವಾದ ಮಂಡಿಸಿತ್ತು.
ವಾದ-ವಿವಾದಗಳು ಮತ್ತು ದೂರುದಾರರು ಸಲ್ಲಿಸಿದ ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗವು, ಎದುರುದಾರರು ಸೇವಾನ್ಯೂನತೆ ಎಸಗಿರುವುದು ಸಾಬೀತಾಗಿದೆ ಎಂದು ಸ್ಪಷ್ಟಪಡಿಸಿತು.ಗ್ರಾಹಕರಿಗೆ ಉಂಟಾದ ಮಾನಸಿಕ ಹಿಂಸೆಗಾಗಿ 1 ರಿಂದ 3ನೇ ಎದುರುದಾರರಾದ ಖಾಸಗಿ ಫುಡ್ ಡಿಲಿವರಿ ಸಂಸ್ಥೆಯ ಸಿ.ಇ.ಒ, ಜೋನಲ್ ಹೆಡ್ ಮತ್ತು ಹೋಟೆಲ್ ಮಾಲೀಕರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ 10,000 ಪರಿಹಾರ ನೀಡಬೇಕು. ಹಾಗೂ ಪ್ರಕರಣದ ಕಾನೂನು ವೆಚ್ಚಕ್ಕಾಗಿ ಹೆಚ್ಚುವರಿಯಾಗಿ 10,000 ಸೇರಿ ಒಟ್ಟು 20,000 ಗಳನ್ನು ಆದೇಶವಾದ 45 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ. ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಜುಲೈ 9 ರಂದು ಆದೇಶ ಪ್ರಕಟಿಸಿದೆ.
Shivamogga Consumer Court Fines Food Delivery App
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
