ಶಿವಮೊಗ್ಗ : ಇನ್ಸ್ಟಾಗ್ರಾಮ್​​ನಲ್ಲಿ ಬಂದ  ಜಾಹೀರಾತು ನಂಬಿ ಬರೋಬ್ಬರಿ 2 ಕೋಟಿ ಕಳೆದುಕೊಂಡ ಯುವ ರೈತ: ಹೇಗಾಯ್ತು ವಂಚನೆ

ಹಂಚಿಕೊಳ್ಳಿ
WhatsApp Facebook X Telegram
Shivamogga Cyber Crime
Shivamogga Cyber Crime

ಶಿವಮೊಗ್ಗ | ಇನ್‌ಸ್ಟಾಗ್ರಾಮ್ ಹಾಗೂ ಟೆಲಿಗ್ರಾಂ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿದ ಭದ್ರವತಿಯ ರೈತ ಯುವಕರೊಬ್ಬರು  ಹಂತ ಹಂತವಾಗಿ ಬರೋಬ್ಬರಿ 2 ಕೋಟಿ 5 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿರೋ ಘಟನೆ ನಡೆದಿದೆ. ಈ ಹಿನ್ನೆಲೆ ಶಿವಮೊಗ್ಗದ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mega Cyber Fraud ಘಟನೆ ವಿವರ

ದೂರುದಾರರು 3 ವರ್ಷದ ಹಿಂದೆ ಅಂದರೆ  2023ರ ಜನವರಿ ತಿಂಗಳಿನಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ನೋಡುತ್ತಿದ್ದಾಗ, ಅದರಲ್ಲಿ Xness ಎಂಬ ಕಂಪನಿಯ ಲೋಗೋ ಬಳಸಿ ಮಾಡಲಾಗಿದ್ದ ಟ್ರೇಡಿಂಗ್ ಜಾಹೀರಾತೊಂದು ಕಾಣಿಸಿಕೊಂಡಿದೆ. ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಟ್ರೇಡಿಂಗ್ ಮಾಡಿದರೆ ಕೆಲವೇ ದಿನಗಳಲ್ಲಿ ಅಧಿಕ ಲಾಭಾಂಶ ಮಾಡಿಕೊಡುತ್ತೇವೆ ಎಂದು ಅದರಲ್ಲಿ ಬರೆಯಲಾಗಿತ್ತು. ಇದನ್ನು ನಿಜವೆಂದು ನಂಬಿದ  ದೂರುದಾರ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ.

ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ನಕಲಿ ವೆಬ್ ಪೇಜ್ ಓಪನ್ ಆಗಿದ್ದು, ಅದರಲ್ಲಿ ದೂರುದಾರರ  ಮೊಬೈಲ್ ನಂಬರ್​ ಮತ್ತು ಬ್ಯಾಂಕ್ ಖಾತೆಗಳ ಸಂಪೂರ್ಣ ಮಾಹಿತಿಯನ್ನು ಪಡೆದು ಸಬ್‌ಮಿಟ್ ಮಾಡಿಸಿಕೊಳ್ಳಲಾಗಿದೆ ತದನಂತರ ವಂಚಕರು ದೂರುದಾರರ ಹೆಸರಿನಲ್ಲಿ ನಕಲಿ ಡಿ-ಮ್ಯಾಟ್ಖಾತೆಯನ್ನು ಸೃಷ್ಟಿಸಿದ್ದಾರೆ. ಆದರೆ, ಅದರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ವಂಚಕರೇ ತಮ್ಮ ಬಳಿ ಇಟ್ಟುಕೊಂಡಿದ್ದರು.  ದೂರುದಾರರು ಪಾಸ್‌ವರ್ಡ್ ಕೇಳಿದಾಗಲೆಲ್ಲಾ, ನೀವು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವಾಗ ನಾವೇ ಓಪನ್ ಮಾಡಿಕೊಡುತ್ತೇವೆ ಎಂದು ನಂಬಿಸಿ ಸಬೂಬು ಹೇಳುತ್ತಾ ಬಂದಿದ್ದಾರೆ.

ಬಳಿಕ ದುರುದಾರನನ್ನು ಟೆಲಿಗ್ರಾಂ ಗ್ರೂಪ್ ಒಂದಕ್ಕೆ ಸೇರಿಸಲಾಗಿದೆ. ಆ ಗ್ರೂಪ್‌ನಲ್ಲಿ ನಕಲಿ ಗ್ರಾಹಕರನ್ನು ಸೃಷ್ಟಿಸಿ, ಅವರಿಗೆ ಭಾರಿ ಲಾಭ ಬಂದಿರುವಂತೆ ಸುಳ್ಳು ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ನಂಬಿಸಲಾಗಿದೆ. ನಂತರ ಟೆಲಿಗ್ರಾಂ ಮೂಲಕವೇ ವಿವಿಧ ಬ್ಯಾಂಕ್ ಖಾತೆಗಳ ಕ್ಯೂಆರ್ ಕೋಡ್ ಮತ್ತು ಯುಪಿಐ ಲಿಂಕ್‌ಗಳನ್ನು ಕಳುಹಿಸಿ, ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಇದನ್ನು ನಂಬಿದ ದೂರುದಾರ 2023ರ ಜನವರಿ ತಿಂಗಳಿನಿಂದ ಹಿಡಿದು 2026ರ ಏಪ್ರಿಲ್ ತಿಂಗಳಿನವರೆಗೆ ಅಂದರೆ ಸತತ ಮೂರು ವರ್ಷಗಳ ಕಾಲ ಹಂತ ಹಂತವಾಗಿ ಒಟ್ಟು 2,05,00,000 ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಮಧ್ಯದಲ್ಲಿ ದೂರುದಾರ ತಮಗೆ ತುರ್ತು ಹಣದ ಅವಶ್ಯಕತೆ ಇದ್ದು, ಲಾಭಾಂಶವನ್ನು ವಿತ್‌ಡ್ರಾ ಮಾಡಿಕೊಡುವಂತೆ ಕೇಳಿದಾಗ, ಈಗಲೇ ವಿತ್‌ಡ್ರಾ ಮಾಡಿದರೆ ನಿಮಗೆ ಭಾರಿ ನಷ್ಟವಾಗುತ್ತದೆ, ಇನ್ನಷ್ಟು ದಿನ ಬಿಟ್ಟರೆ ಕೋಟ್ಯಂತರ ರೂಪಾಯಿ ಲಾಭ ಸಿಗುತ್ತದೆ ಎಂದು ವಂಚಕರು ಬ್ರೈನ್ ವಾಶ್ ಮಾಡಿದ್ದಾರೆ.

ಇದೇ ವರ್ಷ ಅಂದರೆ 2026ರ ಏಪ್ರಿಲ್ ತಿಂಗಳಿನಲ್ಲಿ ಸಂತ್ರಸ್ತರಿಗೆ ವೈಯಕ್ತಿಕವಾಗಿ ಹಣದ ಅವಶ್ಯಕತೆ ಎದುರಾದಾಗ, ಅವರು ತಮ್ಮ ಅಸಲು ಹಣ ಮತ್ತು ಲಾಭವನ್ನು ವಾಪಸ್ ನೀಡುವಂತೆ ಹಠ ಹಿಡಿದಿದ್ದಾರೆ. ಇದರಿಂದ ಆತಂಕಗೊಂಡ ಸೈಬರ್ ಖದೀಮರು, ದೂರುದಾರರ ಹೆಸರಿನಲ್ಲಿದ್ದ ಡಿ-ಮ್ಯಾಟ್ ಖಾತೆಯನ್ನೇ ಬ್ಲಾಕ್​ ಮಾಡಿ ಸಂಪರ್ಕಕ್ಕೆ ಸಿಗದಂತೆ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆ ದೂರುದಾರರಿಗೆ Xness ಕಂಪನಿಯ ಹೆಸರಿನಲ್ಲಿ ಯಾರೋ ಅಪರಿಚಿತರು ಕೋಟಿ ಕೋಟಿ ಹಣ ವಂಚಿಸಿರುವುದು ತಿಳಿದಿದೆ. ಈ ಸಂಬಂಧ ದೂರುದಾರರು ವಂಚಕರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

Mega Cyber Fraud In Shimoga: Man Loses 2 Crore

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor