MESCOM Protest ಶಿವಮೊಗ್ಗ: ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಸರ್ಕಾರದ ಪ್ರಸ್ತಾವಿತ ನಿರ್ಧಾರದ ವಿರುದ್ಧ ಕವಿಪ್ರನಿನಿ (KPTCL) ಅಧಿಕಾರಿಗಳ ಹಾಗೂ ನೌಕರರ ಒಕ್ಕೂಟ (ಫೆಡರೇಶನ್) ಬೃಹತ್ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಉದ್ಯೋಗ ನೇರ ಸಂದರ್ಶನ: ಎಲ್ಲಿ, ಯಾವಾಗ
ನಗರದ ವಿದ್ಯುತ್ ಭವನದ ಮುಂಭಾಗದಲ್ಲಿರುವ ಮೆಸ್ಕಾಂ ಕಚೇರಿ ಎದುರು ಒಗ್ಗೂಡಿದ ಪ್ರತಿಭಟನಾಕಾರರು, ಟಾಟಾ ಪವರ್‌ನಂತಹ ಬೃಹತ್ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಎಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಂದು ವೇಳೆ ವಿದ್ಯುತ್ ವಲಯ ಸಂಪೂರ್ಣ ಖಾಸಗಿಯವರ ಪಾಲಾದರೆ, ಬಡವರು, ರೈತರು ಮತ್ತು ಸಾಮಾನ್ಯ ಗ್ರಾಹಕರ ಮೇಲೆ ಭಾರಿ ಪ್ರಮಾಣದ ವಿದ್ಯುತ್ ಬಿಲ್ ಹೊರೆ ಬೀಳಲಿದೆ. ಇದು ನೇರವಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಜನವಿರೋಧಿ ನೀತಿಯಾಗಿದೆ ಎಂದು ನೌಕರರ ಒಕ್ಕೂಟ ಆರೋಪಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯುತ್ ವಿತರಣೆ ಮಾಡುವ ಹಕ್ಕನ್ನು ತಮಗೆ ನೀಡಬೇಕು ಎಂದು ಟಾಟಾ ಪವರ್ ಕಂಪನಿಯು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಅಧಿಕೃತ ಮನವಿ ಸಲ್ಲಿಸಿದೆ. ಖಾಸಗಿ ಕಂಪನಿಯ ಈ ಮನವಿಯನ್ನು ಆಯೋಗವು ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು ಮತ್ತು ತಕ್ಷಣವೇ ತಿರಸ್ಕರಿಸಬೇಕು ಎಂದು ನೌಕರರು ಒಕ್ಕೂರಲಿನಿಂದ ಒತ್ತಾಯಿಸಿದ್ದಾರೆ.
ಮೆಸ್ಕಾಂ ಸಂಸ್ಥೆಯು ಸದ್ಯ ಸಾರ್ವಜನಿಕರಿಗೆ ಹಾಗೂ ಅನ್ನದಾತರಿಗೆ ಉತ್ತಮವಾದ ವಿದ್ಯುತ್ ಸೇವೆಯನ್ನು ಒದಗಿಸುತ್ತಾ ಬಂದಿದೆ. ರಾಜ್ಯದಲ್ಲೇ ಅತ್ಯಧಿಕ ಐಪಿ ಸೆಟ್ (ನೀರಾವರಿ ಪಂಪ್‌ಸೆಟ್) ಹೊಂದಿರುವ ಹೆಗ್ಗಳಿಕೆ ಮೆಸ್ಕಾಂ ವ್ಯಾಪ್ತಿಯದ್ದಾಗಿದೆ. ಲಕ್ಷಾಂತರ ರೈತರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿರುವ ಮೆಸ್ಕಾಂ, ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸುತ್ತಿದೆ. ಆದರೆ, ಖಾಸಗೀಕರಣದಿಂದಾಗಿ ರೈತರಿಗೆ ಸಿಗುತ್ತಿರುವ ಸಬ್ಸಿಡಿ ಸೌಲಭ್ಯಗಳು ಸಂಪೂರ್ಣವಾಗಿ ಕಡಿತಗೊಳ್ಳುವ ಭೀತಿ ಎದುರಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
