Canara Bank ಶಿವಮೊಗ್ಗ: ಗ್ರಾಹಕರ ಅನುಮತಿಯಿಲ್ಲದೆ ಖಾತೆಯಿಂದ ಹಣ ಕಡಿತಗೊಳಿಸಿ ಸೇವಾ ನ್ಯೂನತೆ ಎಸಗಿದ ಹೊಸನಗರದ ಕೆನರಾ ಬ್ಯಾಂಕ್ ಶಾಖೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಬಿಸಿ ಮುಟ್ಟಿಸಿದೆ. ದೂರುದಾರರಿಗೆ ಕಡಿತವಾದ ಹಣವನ್ನು ಬಡ್ಡಿ ಸಮೇತ ಮರಳಿಸುವಂತೆ ಹಾಗೂ ಲಕ್ಷಾಂತರ ರೂಪಾಯಿ ದಂಡ ಪಾವತಿಸುವಂತೆ ಆಯೋಗವು ಮಹತ್ವದ ತೀರ್ಪು ನೀಡಿದೆ.
ಶಿವಮೊಗ್ಗ : ಗ್ಯಾಸ್ ಟ್ರಬಲ್ ನಡುವೆ ಸಿಲಿಂಡರ್ ಕಳ್ಳತನ
ಹೊಸನಗರ ತಾಲೂಕಿನ ಎಂ. ಗುಡ್ಡೆಕೊಪ್ಪ ನಿವಾಸಿಯೊಬ್ಬರು ಅವರು ಕೆನರಾ ಬ್ಯಾಂಕ್‌ನಲ್ಲಿ ಒಡಿ (OD) ಖಾತೆ ಹೊಂದಿದ್ದು, 2.80 ಲಕ್ಷ ರೂ. ಸೌಲಭ್ಯ ಪಡೆದಿದ್ದರು. ಆದರೆ, ಜೂನ್ 2024 ರಲ್ಲಿ ಯಾವುದೇ ಮುನ್ಸೂಚನೆ ನೀಡದೆ ಬ್ಯಾಂಕ್ ಇವರ ಖಾತೆಯಿಂದ 3,89,544 ರೂ. ಹಣವನ್ನು ಕಡಿತಗೊಳಿಸಿತ್ತು. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರನ್ನು ಪ್ರಶ್ನಿಸಿದಾಗ ಎರಡು ದಿನದಲ್ಲಿ ಹಣ ಮರಳಿಸುವುದಾಗಿ ಭರವಸೆ ನೀಡಿದ್ದರೂ, ಹಣ ಹಿಂತಿರುಗಿಸಿರಲಿಲ್ಲ. ನಂತರ 2025ರಲ್ಲಿ ನೀಡಿದ ಲೀಗಲ್ ನೋಟಿಸ್‌ಗೂ ಬ್ಯಾಂಕ್ ಸ್ಪಂದಿಸದ ಕಾರಣ ಧನಂಜಯ ಅವರು ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಬ್ಯಾಂಕ್‌ನ ನಡೆ ಸೇವಾ ನ್ಯೂನತೆಯಿಂದ ಕೂಡಿದೆ ಎಂದು ತೀರ್ಮಾನಿಸಿತು. ಬ್ಯಾಂಕ್ ಅಧಿಕಾರಿಗಳು ಗ್ರಾಹಕರ ಖಾತೆಯಿಂದ ಅಕ್ರಮವಾಗಿ ಹಣ ಕಡಿತಗೊಳಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ದೂರುದಾರರ ಪರವಾಗಿ ತೀರ್ಪು ಪ್ರಕಟಿಸಲಾಗಿದೆ.
Canara Bank ಕಡಿತಗೊಳಿಸಿದ 3,89,544 ರೂ. ಹಣವನ್ನು ಫೆಬ್ರವರಿ 18, 2025 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 9ರ ಬಡ್ಡಿಯೊಂದಿಗೆ ಮರಳಿಸಬೇಕು. ಅಲ್ಲದೆ, ಗ್ರಾಹಕನಿಗಾದ ಮಾನಸಿಕ ವೇದನೆಗೆ 1,00,000 ರೂ. ಪರಿಹಾರ ಹಾಗೂ ದೂರಿನ ಖರ್ಚು ವೆಚ್ಚವಾಗಿ 10,000 ರೂ.ಗಳನ್ನು 45 ದಿನಗಳ ಒಳಗಾಗಿ ಪಾವತಿಸಬೇಕು. ಒಂದು ವೇಳೆ ನಿಗದಿತ ಸಮಯದಲ್ಲಿ ಹಣ ಪಾವತಿಸಲು ವಿಫಲವಾದರೆ ವಾರ್ಷಿಕ ಶೇ. 12ರ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

Canara Bank Fined for Service Deficiency in Shimoga

