ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ನಿನ್ನೆ ತೀರ್ಥಹಳ್ಳಿ ರಾಮೇಶ್ವರ ದೇವರ ತೆಪ್ಪೋತ್ಸವ ಸಾಕಷ್ಟು ಗಮ್ಮತ್ತಾಗಿತ್ತು. ತೀರ್ಥಹಳ್ಳಿ ಮಟ್ಟಿಗೆ ಅತ್ಯಂತ ವಿಶಿಷ್ಟ ಹಾಗೂ ಅಷ್ಟೆ ಪ್ರತಿಷ್ಟೆಯಾದ ಮತ್ತು ಮಲೆನಾಡ ವಿಶೇಷ ಸಂಭ್ರಮದ ತೆಪ್ಪೋತ್ಸವದಲ್ಲಿ ಮತ್ತೆಲ್ಲವೂ ಬದಿಗೊತ್ತಿ ಭಕ್ತಿ,ಭಕ್ತ ಮತ್ತು ರಾಮೇಶ್ವರ ದೇವರ ಆರಾಧನೆಯ ಸಂಭ್ರಮ ವಿಶೇಷವಾಗಿ ಕಳೆನೀಡಿತ್ತು,. ತುಂಗೆಯ ನಡುವೆ ರಾಮೇಶ್ವರ ದೇವರ ದೀಪಾಲಂಕೃತ ತೆಪ್ಪ ತೇಲುತ್ತಿರಲು, ಸುತ್ತಲು ಆಗಸಕ್ಕೆ ಸಿಡಿದು, ಕಾರ್ಮುಗಿಲ ಚಿತ್ತಾರ ಬಿಡಿಸುತ್ತಿದ್ದ ಪಟಾಕಿಗಳು ಕಣ್ಮನಕ್ಕೆ ಹಬ್ಬವನ್ನ ತಂದಿಟ್ಟಿತ್ತು.
ಈಜಲು ತೆರಳಿದ್ದ ಡಿವಿಎಸ್ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು
ರೀಲ್ಸ್ ಯುಗದಲ್ಲಿ, ವೈರಲ್ ಕಂಟೆಂಟ್ಗಳ ಆಗರವನ್ನೆ ಸೃಷ್ಟಿಸಬಲ್ಲ ಪರಶುರಾಮನ ತುಂಗೆಯ ತೀರದಲ್ಲಿ ನಿನ್ನೆ ನಡೆದಿದ್ದು ಕೇವಲ ತೆಪ್ಪೋತ್ಸವಷ್ಟೆ ಅಲ್ಲ, ಈ ವರ್ಷದ ನೆನಪಿನ ಹೆಜ್ಜೆಗಳನ್ನು ತುಂಗೆಯ ನೀರಿನಲ್ಲಿ ತೊಳೆದುಕೊಂಡು ಬರುವ ವರ್ಷದ ಜೀವಕಳೆಗೆ ಮೈ ಮನವನ್ನು ನಿರೀಕ್ಷೆಯಲ್ಲಿಟ್ಟುವ ಕ್ಷಣ.. ಜಾತ್ರೆಯ ಕಲರ್ ಫುಲ್ ಬಣ್ಣಗಳ ನಡುವೆ ನಕ್ಕ ಮುಖಗಳ ಜೊತೆಗೆ ಒಂದಿಷ್ಟು ನಡೆದು, ಹೊಸತೊಂದು ಕನಸ್ಸಿಗೆ ಅಡಿಪಾಯ ಹಾಕುವ ಎಳೆ ಮನ್ಸುಗಳು ಒಂದು ಕಡೆಯಾದರೆ, ಇನ್ನೊಂದು ಹೆಗೆಲೆತ್ತರ ಬೆಳೆದ ಮಕ್ಕಳ ಕಳ್ಳಾಟ ಕಾಣುತ್ತಲೇ, ಅಬ್ಬಾ ಇವು ಆಡದ್ ಕಂಡ್ರೆ ಭಯ ಆತದೆ, ಕಣ್ರಿ, ನಾವ್ ಸಣ್ಣರಿತ್ರ ಹಿಂಗಲ್ಲ ಮಾಡಿದ್ದೇವೇನ್ರಿ..ಇದೆಂಥದ್ರಿ..ಅಂತಾ ಗೊಣಗುತ್ತಲೇ, ಹಳೆ ನೆನಪಿನ ಜಾತ್ರೆಯ ಮೆಲುಕಿನ ಜೊತೆ , ಎಂದೋ ಕಂಡ ಹಳೆ ಮುಖವನ್ನ ಮತ್ತೆ ಹುಡುಕಾಡುವ ಕಣ್ಣಗಳ ಕಲರವ ಇನ್ನೊಂದು ಕಡೆ, ದೋಸೆ ಮೇಳದ ಹಿಂಡು ಹಿಂದು ಸ್ಟಾಲ್, ಜಾತ್ರೆ ಆಪರ್ ಏನ್ ತಗೊಂಡ್ರು ಇಪ್ಪತ್ತು.. ಏನ್ ತಗೊಂಡ್ರು ಇಪ್ಪತ್ತು.. ಎನ್ನುವ ಆಫರ್, ಅಡಿಯಿಂದ ಮುಡಿಯವರೆಗಿನ ಸಿಂಗಾರದ ಸಾಮಾಗ್ರಿಗಳನ್ನೆ ತೂಗು ಬಿಟ್ಟು, ರಸ್ತೆಯನ್ನ ಸಿಂಗರಿಟಿಸದ ಕರಿ,ಹಳಿದಿ ನೀಲಿ ಟಾರ್ಪಲ್ಗಳ ನಡುವೆ ಗಿಜುಗುಟ್ಟುವ ರಶ್ನಲ್ಲಿ ಎದುರುಬದುರಿಗೆ ನಡೆದು ಹೋಗುವ ಸಡಗರಕ್ಕೆ ಹೋಲಿಕೆಯು ಇಲ್ಲ, ಬರೆಯಲು ಅಕ್ಷರವೂ ಸಿಗದು. ಇಲ್ಲಿ ಪ್ರತಿ ಮನಸ್ಸಿಗೂ ಖುಷಿಯಿದೆ, ಇಲ್ಲಿ ಪ್ರತಿ ಹೃದಯಕೂ ಹಿಂದಿನ ನೆನಪುಂಟು, ಇಲ್ಲಿ ಪ್ರತಿ ಜೀವಕೂ ಹೊಸ ಬಡಿತವಿದೆ. ಇಲ್ಲಿ ಪ್ರತಿ ಆತ್ಮಕ್ಕೂ ಸಪರೇಟು ತೃಪ್ತಿ ಸಿಗುವುದು. ಒಂದೆ ಮಾತು ತೆಗೆಯಬೇಕೆಂದರೆ, ತೀರ್ಥಹಳ್ಳಿಯ ತೆಪ್ಪೋತ್ಸವದಲ್ಲಿ ಕುವೆಂಪು ಹೇಳಿದ ಮಾತಿದೆ..ಇಲ್ಯಾರು ಅಮುಖ್ಯರಲ್ಲ, ಇಲ್ಯಾರು ಮುಖ್ಯರಲ್ಲ, ನೀರೆಲ್ಲವೂ ತೀರ್ಥ, ತೀರ್ಥವೆಲ್ಲವೂ ನೀರು…
ಮನುಷ್ಯನ ತಲ್ಲಣಗಳನ್ನ ತಂಪಾಗಿಸಿ ತುಂಗೆಯ ತಂಗಾಳಿಯ ನಡುವೆ ಕತ್ತಲು ಸೃಷ್ಟಿಸಿದ ದೀಪಗಳ ಚೆಲುವಿನ ತೆಪ್ಪೋತ್ಸವಕ್ಕೆ ಮೆರಗು ನೀಡುವ ಇನ್ನೊಂದು ಅಂಶ ಅಂದರೆ, ಸಮಾಜದ ಸಹಜ ವೈವಿದ್ಯ ವೈರುದ್ಯಗಳೆಲ್ಲಾವೂ ಕರಗಿ ರಾಮೇಶ್ವರ ದೇವರ ಸನ್ನಿಧಿಯಲ್ಲಿ ತೃಣವಾಗಿ ನಿಲ್ಲುವಂತಹ ಮನಸ್ಸಿನ ಗುಣ. ಇದಕ್ಕೆ ದೊಡ್ಡ ಸಾಕ್ಷಿಯೆಂದರೆ ತೀರ್ಥಹಳ್ಳಿಯಲ್ಲಿ ನಿನ್ನೆ ಒಗ್ಗಟ್ಟಾಗಿ ಒಟ್ಟೊಟ್ಟಾಗಿ ಕಾಣಿಸಿಕೊಂಡ ರಾಜಕಾರಣ..ಅವರಿಬ್ಬರಿಗಾಗಲ್ಲ ಅಲ್ಲಾ, ಇವತ್ ನೋಡ್ ಇಬ್ಬರು ಒಟ್ಟಿಗೆ ಹೋತಿದ್ದಾರೆ..ಓಹ್..ಅಂತಾ ಜಾತ್ರೆಯ ಜನವೇ ಉದ್ಘಾರ ತೆಗೆಯುವಂತೆ ತೀರ್ಥಹಳ್ಳಿ ಹಾಗೂ ಮಲೆನಾಡ ರಾಜಕಾರಣಿಗಳು ತೆಪ್ಪೋತ್ಸವದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕಿಂತ ಹೆಚ್ಚಾಗಿ ತೆಪ್ಪೋತ್ಸವದ ಫೋಟೋಗಳೇ ಮಾತನಾಡುತ್ತವೆ…



ಇನ್ನೂ ಜಾತ್ರೆ ಅಂದ್ಮೇಲೆ ಪೊಲೀಸ್ರಿಗೆ ಎಂದಿಗಿಂತ ಜಾಸ್ತಿನೆ ಕೆಲಸ ಇತ್ತು. ಅದರ ನಡುವೆಯೂ ಸಿಬ್ಬಂದಿಗಳೂ ಸಹ ಜಾತ್ರೆಯನ್ನ ಎಂಜಾಯ್ ಮಾಡಿದ್ರು. ಹೇಳಿಕೇಳಿ ಬಾನುವಾರ, ತೀರ್ಥಹಳ್ಳಿ ರೋಡಲ್ಲಿ ಓಡಾಡಿದ ಕಾರ್ಗಳಿಗೆ ಲೆಕ್ಕವೆ ಇರಲ್ಲ. ಪೇಟೆ ಬೀದಿಯಲ್ಲಿ ವಾಹನಗಳಿಗೆ ಎಂಟ್ರಿ ಇಲ್ಲದಿದ್ದಕ್ಕೆ ತಲೆಬಿಸಿ ಆಗಲಿಲ್ಲ. ಜನದ ನಡುವೆ ಕಾರ್ ತಗೊಂಡು ಓಡಾಡಕೂ ಆಗ್ತಿರಲಿಲ್ಲ ಅಂದ್ಕೊಳ್ಳಿ..ಜಾತ್ರೆ ವ್ಯಾಪಾರವೂ ಜೋರಾಗಿತ್ತು. ಸುಮಾರು 10 ಲಕ್ಷದ ಪಟಾಕಿ ಗರ್ನಲ್ ಢಂ ಅನ್ನಿಸಿದ್ದಾಯ್ತು. ತುಂಗೆಯ ಬಂಡೆ ಮೇಲೆ ಒಂದು ಸಾರು, ಒಂದು ಅನ್ನ ಒಂದು ಪಾಯಸ, ಈ ಸಾಲಲ್ಲಿ, ಇನ್ನೊಂದು ಸಾಲಲ್ಲಿ ಟೊಮ್ಯಾಟೋ ಬಾತ್..ಅನ್ನಪ್ರಸಾದ್ವೂ ಹೊಟ್ಟೆತೃಪ್ತಿಯಾಗಿಸಿತ್ತು. ಎಲ್ಲಾ ಅಚ್ಚಕಟ್ಟಾಗಿ ಆಯ್ತಲ್ಲ ಅಂತಾ ಜವಾಬ್ದಾರಿ ಹೊತ್ತವರೂ ಸ್ಟೇಟ್ ಎದುರು ಎರಡು ಹೆಜ್ಜೆ ಹಾಕಿ ಕುಣಿವ ಹೊತ್ತಿಗೆ ಪೇಟೆ ಬೀದಿಗಳಲ್ಲಿನ ಗೌಜು ಗಮ್ಮತ್ತು ಗಜಿಬಿಜಿ ನಡುವೆ ಹುಡುಗ ಹುಡುಗಿಯರ ತಿರುಗಾಟದ ಹೊಸವರುಷದ ಹೊಸತನ್ನು ನಿನ್ನೆಯೇ ಸ್ವಾಗತಿಸಿದಂತಿತ್ತು.


Tirthahalli Rameshwara Teppotsava 2025
ವರದಿ : ಅಜ್ಜಿಮನೆ ಗಣೇಶ್
