Shivamogga Engineer Cheated ಶಿವಮೊಗ್ಗ : ಶಿವಮೊಗ್ಗದ ಕುವೆಂಪು ನಗರದಲ್ಲಿ ವಾಸಿಸುವ ಮಹಿಳಾ ಎಂಜಿನಿಯರ್‌ರೊಬ್ಬರಿಗೆ ಸೈಬರ್ ವಂಚಕರು ಕೇವಲ ಒಂಬತ್ತು ದಿನಗಳ ಅವಧಿಯಲ್ಲಿ ಬರೋಬ್ಬರಿ ₹11 ಲಕ್ಷಕ್ಕೂ ಅಧಿಕ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಹಿನ್ನೆಲೆ ಮಹಿಳೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ : ವಾಹನ ಮಾಲೀಕನಿಗೆ ಬಿತ್ತು ನೋಡಿ ಬರೋಬ್ಬರಿ 12,500 ರೂ ದಂಡ
ದೂರಿನ ವಿಪ್ರಕಾರ, ನವೆಂಬರ್ 2, 2025 ರಂದು ಮಹಿಳೆ ಮೊಬೈಲ್ ನೋಡುತ್ತಿದ್ದಾಗ, ವಂಚಕರು ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಮೂಲಕ ಅವರನ್ನು ಸಂಪರ್ಕಿಸಿದ್ದಾರೆ. ವಂಚಕರು ತಮ್ಮನ್ನು ‘ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ (NSE)’ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು, ‘ವರ್ಕ್ ಫ್ರಂ ಹೋಮ್’ ಉದ್ಯೋಗದ ಆಫರ್ ನೀಡಿದ್ದಾರೆ.
ತಾವು ನೀಡುವ ವಿವಿಧ ಆನ್‌ಲೈನ್ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಮಹಿಳೆಯನ್ನು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ 02-11-2025 ರಿಂದ 11-11-2025 ರ ನಡುವಿನ ಕೇವಲ ಒಂಬತ್ತು ದಿನಗಳ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 11,46,273 ಮೊತ್ತದ ಹಣವನ್ನು ವಂಚಕರು ಹೇಳಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ನಿಗದಿತ ಹಣ ವರ್ಗಾವಣೆ ಮಾಡಿದ ನಂತರ, ಮಹಿಳೆ ಲಾಭಾಂಶ ಮತ್ತು ತಮ್ಮ ಹಣವನ್ನು ವಾಪಸ್ ಕೇಳಿದಾಗ, ವಂಚಕರು ಮತ್ತೆ ಬೇರೆ ಬ್ಯಾಂಕ್ ಖಾತೆಗೆ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವಂತೆ ಕೇಳಿದ್ದಾರೆ. ಇದರಿಂದ ಸಂತ್ರಸ್ತರಿಗೆ ಅನುಮಾನ ಬಂದಿದ್ದು, ಸ್ನೇಹಿತರ ಬಳಿ ವಿಚಾರಿಸಿದಾಗ ತಾವು ಸೈಬರ್ ವಂಚನೆಗೆ ಬಲಿಯಾಗಿರುವುದು ತಿಳಿದುಬಂದಿದೆ.
Shivamogga Engineer Cheated of ₹11 Lakh

