SHIVAMOGGA | Jan 23, 2024 | ಕೆಲಸ ಅಂತಾ ಸಿಕ್ಕಿದ್ದನ್ನೆಲ್ಲಾ ಹೇಳಿದ್ದನ್ನೆಲ್ಲಾ ನಂಬಲು ಹೋಗಬಾರದು. ಹಾಗೆ ನಂಬಿದರೇ ಮೋಸ ಗ್ಯಾರಂಟಿ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ವಿದೇಶದಲ್ಲಿ ಕೆಲಸ ಮತ್ತು ವಿಸಾ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ನಾಲ್ವರು ಯುವಕರಿಂದ 4.23 ಲಕ್ಷ ರೂ. ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಯಚೂರು
ಒಂದೂವರೆ ವರ್ಷವಾದರೂ ಕೆಲಸ, ವೀಸಾ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ವಂಚಿಸಲಾಗಿದೆ. ಈ ಸಂಬಂಧ ರಾಯಚೂರಿನ ಸಯ್ಯದ್ ಜಾಹೀರುದ್ದೀನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಗೂಗಲ್ ಪೇ ಮೂಲಕ ದೋಖಾ
ಸಯ್ಯದ್ ಜಾಹೀರುದ್ದೀನ್ ಎಂಬಾತ ಶಿವಮೊಗ್ಗದ ನಾಲ್ವರು ಯುವಕರಿಗೆ ವಿದೇಶದಲ್ಲಿ ಕೆಲಸ ಮತ್ತು ವೀಸಾ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ. ಗೂಗಲ್ ಪೇ ಮೂಲಕ ಮತ್ತು ನಗದು ರೂಪದಲ್ಲಿ ಹಣ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿದೆ.
2022ರ ನವೆಂಬರ್ನಲ್ಲಿ ಹಣ ಪಡೆದಿದ್ದು ಈತನಕ ಕೆಲಸವನ್ನು ಕೊಡಿಸದೆ, ಹಣವನ್ನು ಹಿಂತಿರುಗಿಸಿಲ್ಲ. ನಾಲ್ವರು ಯುವಕರಿಂದ ಒಟ್ಟು 4.23 ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ. ಸಯ್ಯದ್ ಜಾಹೀರುದ್ದೀನ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ.
