ಅವೈಜ್ಞಾನಿಕ ಆದೇಶಗಳನ್ನು ಹಿಂಪಡೆಯಲು ಉಪನ್ಯಾಸಕರಿಂದ ಡಿಸಿ ಮೂಲಕ ಸಿಎಂಗೆ ಮನವಿ

prathapa thirthahalli
Prathapa thirthahalli - content producer

Karnataka Education Department : ಶಿವಮೊಗ್ಗ : 2024-25ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಇನ್ನಿತರ ಕಾರ್ಯಗಳ ಬಾಕಿ ಇರುವ 213.5 ಕೋಟಿ ರೂಪಾಯಿಗಳ ಸಂಭಾವನೆಯನ್ನು ಕೂಡಲೇ ಬಿಡುಗಡೆ ಮಾಡಿ ವಿತರಿಸಬೇಕು ಎಂಬುವುದನ್ನು ಸೇರಿದಂತೆ ಇನ್ನಿತರೇ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಶಿಕ್ಷಣ (ಪದವಿಪೂರ್ವ) ಕಾಲೇಜುಗಳ ಉಪನ್ಯಾಸಕರುಗಳ ಸಂಘವು  ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದೆ

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕಾಲೇಜುಗಳಲ್ಲಿ ಅವೈಜ್ಞಾನಿಕವಾಗಿ ಹೊರಡಿಸಿರುವ ಮತ್ತು ಹೊರಡಿಸುತ್ತಿರುವ ಆದೇಶಗಳನ್ನು ಹಿಂಪಡೆಯಬೇಕು ಎಂಬುದನ್ನು ಪ್ರಮುಖ ವಿಷಯವನ್ನಾಗಿ ಇಟ್ಟುಕೊಂಡು ಸಂಘವು ಮನವಿ ಮಾಡಿದೆ. ಇತ್ತೀಚೆಗೆ ಇಲಾಖೆಯಿಂದ ಬರುತ್ತಿರುವ ಪೂರಕವಲ್ಲದ ಆದೇಶಗಳು ತಮ್ಮ ದೈನಂದಿನ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿವೆ. ಇದರಿಂದ ಪದವಿ ಪೂರ್ವ ಕಾಲೇಜುಗಳ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪುತ್ತಿದೆ ಎಂದು ಸಂಘವು ಅಳಲು ತೋಡಿಕೊಂಡಿದೆ.ಪರೀಕ್ಷಾ ಮಂಡಳಿಯನ್ನು ಪದವಿಪೂರ್ವ ಇಲಾಖೆಯಿಂದ ಪ್ರತ್ಯೇಕಿಸಿದ ನಂತರ, ದೇಶದಲ್ಲಿ ಮಾದರಿಯಾಗಿದ್ದ ಪದವಿ ಪೂರ್ವ ಶಿಕ್ಷಣ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಪದವಿಪೂರ್ವ ಶಿಕ್ಷಣಕ್ಕೆ ಸಂಬಂಧವೇ ಇಲ್ಲದ DIETನ ಪ್ರಶಿಕ್ಷಣಾರ್ಥಿಗಳನ್ನು ಕಾಲೇಜುಗಳ ಸ್ಥಿತಿಗತಿಗಳ ದತ್ತಾಂಶ ಕ್ರೋಢೀಕರಿಸುವ ನೆಪದಲ್ಲಿ ಪರಿಶೀಲನೆಗೊಳಪಡಿಸಲು ಹೊರಟಿರುವುದು ಶಿಕ್ಷಣದ ದುರಂತ ಎಂದು ಸಂಘ ಬೇಸರ ವ್ಯಕ್ತಪಡಿಸಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಅಸ್ಥಿರಗೊಳ್ಳದಂತೆ ನೋಡಿಕೊಳ್ಳುವುದು ತಮ್ಮ ಧೇಯವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಕಳಕಳಿಯ ಮನವಿ ಮಾಡಿದೆ.

Karnataka Education Department ಸಂಘದ ಪ್ರಮುಖ ಬೇಡಿಕೆಗಳು ಇಂತಿವೆ:

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (DSERT) ಹೊರಡಿಸಿರುವ ಅವೈಜ್ಞಾನಿಕ ಆದೇಶಗಳನ್ನು ಹಿಂಪಡೆಯಬೇಕು.

ಸರ್ಕಾರಿ/ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು.

ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.

ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕೇತರ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು.

ಉಪನಿರ್ದೇಶಕರ ಕಚೇರಿಯನ್ನು ಬಲವರ್ಧನೆಗೊಳಿಸಲು ಇಬ್ಬರು ಹಿರಿಯ ಪ್ರಾಂಶುಪಾಲರನ್ನು ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ನಿಯೋಜಿಸಿ ಪರೀಕ್ಷೆ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸಬೇಕು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿರುವ ಪರೀಕ್ಷಾ ವಿಭಾಗವನ್ನು ಈ ಹಿಂದೆ ಇದ್ದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ವರ್ಗಾಯಿಸಬೇಕು.

ಪರೀಕ್ಷೆ ಮತ್ತು ಶೈಕ್ಷಣಿಕ ಸುಧಾರಣೆ ತರಲು ಉನ್ನತ ಶಿಕ್ಷಣ ಇಲಾಖೆಯಲ್ಲಿರುವಂತೆ ಅಕಾಡೆಮಿಕ್ ಕೌನ್ಸಿಲ್ ಸಮಿತಿಯನ್ನು ರಚಿಸಬೇಕು.ಕೆಪಿಎಸ್ ಶಾಲೆಗಳ ಆಡಳಿತಾತ್ಮಕ ಮತ್ತು ಆರ್ಥಿಕ ಸಂಪೂರ್ಣ ಅಧಿಕಾರ ಜವಾಬ್ದಾರಿಯನ್ನು ಆ ಕಾಲೇಜಿನ ಪ್ರಾಂಶುಪಾಲರಿಗೆ DDO ನೀಡಿ ನೀಡಬೇಕು.

ಪ್ರಸ್ತುತ ಇರುವ ವಿದ್ಯಾರ್ಥಿ ಮತ್ತು ಉಪನ್ಯಾಸಕರ ಅನುಪಾತ 320:1 ಇರುವುದನ್ನು 180:1 (ಪ್ರತಿ ತರಗತಿಗೆ ಕನಿಷ್ಠ 20 ಗರಿಷ್ಠ 45) ಅನುಪಾತಕ್ಕೆ ಮಾರ್ಪಡಿಸುವುದು.

ಸರ್ಕಾರಿ ನೌಕರರಿಗೆ ನೀಡುತ್ತಿರುವ ನಗದುರಹಿತ ಚಿಕಿತ್ಸೆಯನ್ನು ಅನುದಾನಿತ ಕಾಲೇಜಿನ ಉಪನ್ಯಾಸಕರು ಮತ್ತು ಬೋಧಕೇತರ ಕುಟುಂಬ ವರ್ಗಕ್ಕೂ ವಿಸ್ತರಿಸುವುದು.

ದಿನಾಂಕ 01/04/2006 ರ ನಂತರ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಿಗೆ ಆಯ್ಕೆಯಾಗಿರುವ ಉಪನ್ಯಾಸಕರಿಗೆ ನಿಶ್ಚಿತ ಪಿಂಚಣಿ ಯೋಜನೆ (NPS) ಜಾರಿಗೊಳಿಸಬೇಕು.

Karnataka Education Department

Karnataka Education Department
Karnataka Education Department  ಮನವಿ ಸಲ್ಲಿಸುತ್ತಿರುವ ಉಪನ್ಯಾಸಕರು
Share This Article