ಸಕ್ರೆಬೈಲು ಬಿಡಾರಕ್ಕೆ ಮತ್ತೊಂದು ಕಾಡಾನೆ ಆಗಮನ : ದಾರಿಯುದ್ದಕ್ಕೂ ಗಜರಾಜನಿಗೆ ರಾಜ ಮರ್ಯಾದೆ 

This Article Written by / Prathapa thirthahalli / ಆಗಷ್ಟ್ 5, 2025

Jp story ಸೆರೆ ಹಿಡಿದ ಆನೆ

Jp story ಸಕ್ರೆಬೈಲು ಆನೆ ಬಿಡಾರದಲ್ಲಿ ನೆನ್ನೆ ಸಂಜೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲರೂ ಬಿಡಾರಕ್ಕೆ ಆಗಮಿಸಿದ ಕಾಡಾನೆಯನ್ನು ನೋಡಲು ಕ್ರಾಲ್ ಹತ್ತಿರ ದೌಡಾಯಿಸಿದ್ದರು. ಚಿಕ್ಕಮಗಳೂರಿನ ಮುಡಬೂರಿನಿಂದ ಲಾರಿಯಲ್ಲಿ ಹೊರಟ ಆನೆಗೆ ಮಾರ್ಗದುದ್ದಕ್ಕೂ ಜನರಿಂದ ರಾಜ ಮರ್ಯಾದೆ ಸಿಕ್ಕಿತು. ಮಂಡಗದ್ದೆ ಬಳಿ ಬರುತ್ತಿದ್ದಂತೆ ಸ್ಥಳೀಯರು ದಾರಿಯುದ್ದಕ್ಕೂ ನಿಂತು ಮೊಬೈಲ್ ನಲ್ಲಿ ಕಾಡಾನೆ ಚಿತ್ರವನ್ನು ಸೆರೆಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಕ್ರೆಬೈಲಿನ ಕ್ರಾಲ್ ಬಳಿ ಕಾಡಾನೆ ಬರುವ ಹೊತ್ತಿಗೆ ರಾತ್ರಿ ಎಂಟು ಗಂಟೆಯಾಗಿತ್ತು. ಜನರು ಮೊಬೈಲ್ ಬ್ಯಾಟರಿಯಲ್ಲಿಯೇ ಕಾಡಾನೆಯನ್ನು ಕಣ್ತುಂಬಿಕೊಂಡರು.

Jp story ಎನ್ ಆರ್ ಪುರ ಕುಪ್ಪೂರಿನಲ್ಲಿ ಸೆರೆಯಾದ ಕಾಡಾನೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಪುರ ತಾಲೂಕಿನಲ್ಲಿ ಕಳೆದ ಆರು ತಿಂಗಳಿನಿಂದ ಬೀಡುಬಿಟ್ಟು ರೈತರ ಹೊಲಗದ್ದೆಗಳಿಗೆ ಘೀಳಿಟ್ಟು ಬೆಳೆ ಹಾನಿಮಾಡುತ್ತಿದ್ದ ಪುಂಡಾನೆಯನ್ನು ನೆನ್ನೆ ಸೆರೆ ಹಿಡಿಯಲಾಗಿದೆ. ಕಳೆದ ವಾರದ ಹಿಂದೆ ಇದೇ ಭಾಗದಲ್ಲಿ ಒಂದು ಕಾಡಾನೆಯನ್ನು ಸೆರೆಹಿಡಿಯಲಾಗಿತ್ತು. ಈ ಸಂದರ್ಭದಲ್ಲಿ ಸಕ್ರೆಬೈಲು ಬಿಡಾರದಿಂದ ನಾಲ್ಕು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಕಾಡಾನೆ ಸೆರೆಹಿಡಿದ ನಂತರ ಕುಮ್ಕಿ ಆನೆಗಳು ಬಿಡಾರಕ್ಕೆ ವಾಪಸ್ಸಾಗಿದ್ದವು. ಇದರ ಬೆನ್ನಲ್ಲೇ ಮತ್ತೆ ಕುಪ್ಪೂರು ಮಡಬೂರು ಬಳಿ ಕಾಡಾನೆ ಉಪಟಳ ನೀಡುತ್ತಿದ್ದರಿಂದ ಮಲೆನಾಡಿನ ಜನತೆ ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದಿದ್ದರು.

ಆ ಭಾಗದಲ್ಲಿ ಕಾಡಾನೆ ದಾಳಿಗೆ ಮೂವರು ಬಲಿಯಾಗಿದ್ದಲ್ಲದೆ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಾಡಾನೆ ಸೆರೆಗೆ ಸ್ಥಳೀಯರು ಪಟ್ಟು ಹಿಡಿದು ಎನ್.ಪುರ ಖಾಂಡ್ಯ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಕಾಡಾನೆ ಸೆರೆಗೆ ಅನುಮತಿ ನೀಡಿತು. ಕಳೆದ ವಾರ ಇದೇ ಭಾಗದಲ್ಲಿ ಒಂದು ಕಾಡಾನೆ ಸೆರೆಯಾಗಿತ್ತು. ಇದಾದ ಬಳಿಕ 04-08-25 ರಂದು ಮಡಬೂರು ಮತ್ತು ಕುಪ್ಪೂರು ಬಳಿಯಿದ್ದ ಕಾಡಾನೆಯನ್ನು ಸೆರೆಹಿಡಿಯಲಾಯಿತು. ಕಳೆದ 6 ತಿಂಗಳಿಂದ ಮಡಬೂರು, ಕುಪ್ಪೂರು ಸೇರಿ ಸುತ್ತಮುತ್ತ ಕೃಷಿ ಭೂಮಿ ಹಾನಿಮಾಡಿದ್ದ ಪುಂಡಾನೆ ಸೆರೆಗೆ ಜನರಿಂದ ಭಾರಿ ಒತ್ತಡವಿತ್ತು. ಡಿ.ಎಫ್.ಓ ಶಿವಶಂಕರ್, ಆರ್.ಎಫ್.ಓ. ಪ್ರವೀಣ್, ಸಕ್ರೆಬೈಲು ವೈದ್ಯ ಮುರುಳಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಮಾವುತ ಕಾವಾಡಿ ಟ್ರಾಕರ್ ಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Jp story ಕ್ರಾಲ್ ನಲ್ಲಿವೆ ಮೂರು ಕಾಡಾನೆಗಳು

ಸಕ್ರೆಬೈಲು ಆನೆ ಬಿಡಾರದ ಕ್ರಾಲ್ ನಲ್ಲಿ ಈಗ ಮೂರು ಕಾಡಾನೆಗಳಿವೆ. ಇವುಗಳಲ್ಲಿ ಇತ್ತೀಚೆಗೆ ಸೆರೆಹಿಡಿದ ಎರಡು ಕಾಡಾನೆಗಳ ತರಬೇತಿಗೆ ಇನ್ನು ಸಿಬ್ಬಂದಿಗಳು ನೇಮಕವಾಗದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಸೆರೆ ಹಿಡಿದ ಕಾಡಾನೆಯನ್ನು ಪುನಃ ಕಾಡಿಗೆ ಬಿಡುವ ಪ್ಲಾನ್ ಏನಾದ್ರು ಇಲಾಖೆ ಅಧಿಕಾರಿಗಳು ಮಾಡಿದ್ದಾರಾ ಎಂಬುದಕ್ಕೆ ಸ್ಪಷ್ಟತೆಯಿಲ್ಲ. ಸಕ್ರೆಬೈಲು ಬಿಡಾರದ ಖೆಡ್ಡಾಗೆ ಸೆರೆ ಸಿಕ್ಕ ಕಾಡಾನೆ ಬಂದಾಗ ತಕ್ಷಣವೇ ಅದರ ಲಾಲನೆ ಪಾಲನೆಗೆ ಸಿಬ್ಬಂದಿಗಳ ನೇಮಕವಾಗುತ್ತಾರೆ. ಪಳಗಿಸುವ ತರಬೇತಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ ಇಲ್ಲಿ ಆ ರೀತಿಯ ಚಿತ್ರಣಗಳು ಕಾಣದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒಂದು ಬಾರಿ ಮಾನವ ಸಂಪರ್ಕಕ್ಕೆ ಬರುವ ಪ್ರಾಣಿಗಳನ್ನು ಪುನಃ ಕಾಡಿಗೆ ಬಿಟ್ಟಾಗ ಅವು ಮಾನವನತ್ತ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅಂತಹ ಘಟನೆಗಳು ಮರುಕಳಿಸಿದ ಉದಾಹರಣೆಗಳು ಸಾಕಷ್ಟಿದೆ. ಸೆರೆಸಿಕ್ಕ ಕಾಡಾನೆಯನ್ನು ಪಳಗಿಸಿ, ತರಬೇತಿ ನೀಡುವುದೇ ಸೂಕ್ತ ಎಂಬುದು ನಿವೃತ್ತ ಅನುಭವಿ ಮಾವುತ ಕಾವಾಡಿಗಳ ಅಭಿಪ್ರಾಯವಾಗಿದೆ.

Jp story ಸೆರೆ ಹಿಡಿದ ಆನೆ
Jp story ಸೆರೆ ಹಿಡಿದ ಆನೆ

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ

Leave a Comment