Traffic Challan Scam ಶಿವಮೊಗ್ಗ : ತಂತ್ರಜ್ಞಾನ ಮುಂದುವರಿದಿರುವ ಈ ಯುಗದಲ್ಲಿ ಸೈಬರ್ ವಂಚಕರು ಜನರನ್ನು ಯಾವುದೇ ರೂಪದಲ್ಲಿ ವಂಚಿಸಿ ಹಣ ಲೂಟಿ ಮಾಡಲು ಹೊಂಚು ಹಾಕುತ್ತಲೇ ಇರುತ್ತಾರೆ. ಇಂತಹ ವಂಚಕರು ಬಳಸುವ ತಂತ್ರಗಳನ್ನು ನಿಜವೆಂದು ನಂಬುವ ಅಮಾಯಕರು ಮೋಸ ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ, ಮೊಬೈಲ್‌ಗೆ ಬಂದ ಎಪಿಕೆ (APK) ಫೈಲ್ ಒಂದನ್ನು ಕ್ಲಿಕ್ ಮಾಡಿದ ಶಿವಮೊಗ್ಗದ ವ್ಯಕ್ತಿಯೊಬ್ಬರು ₹1,47,399 ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ವ್ಯಕ್ತಿಯೊಬ್ಬರ ವಾಟ್ಸಾಪ್‌ಗೆ ಟ್ರಾಫಿಕ್ ಚಲನ್ ಎಂಬ ಹೆಸರಿನಲ್ಲಿ ಒಂದು ಎಪಿಕೆ ಫೈಲ್ ಸಂದೇಶ ಬಂದಿತ್ತು. ಅದರಲ್ಲಿ, “ನಿಮ್ಮ ಆನ್‌ಲೈನ್ ಟ್ರಾಫಿಕ್ ಫೈನ್ ಅನ್ನು ನೀವೇ ಕಟ್ಟಬಹುದು” ಎಂದು ಬರೆಯಲಾಗಿತ್ತು. ಇದನ್ನು ನಂಬಿದ ದೂರುದಾರರು ಆ ಫೈಲ್ ಬಗ್ಗೆ ತಿಳಿದುಕೊಳ್ಳಲು ಅದನ್ನು ಕ್ಲಿಕ್ ಮಾಡಿದರು. ನಂತರ ಅವರ ಮೊಬೈಲ್‌ನಲ್ಲಿ ಆ ಅಪ್ಲಿಕೇಶನ್ ಇನ್‌ಸ್ಟಾಲ್ ಆಗಿದೆ. ದೂರುದಾರರು ತಮ್ಮ ವಾಹನದ ನಂಬರ್ ಮೇಲೆ ಯಾವುದಾದರೂ ದಂಡ (ಫೈನ್) ಇದೆಯೇ ಎಂದು ತಿಳಿದುಕೊಳ್ಳಲು ವಾಹನದ ಸಂಖ್ಯೆಯನ್ನು ನಮೂದಿಸಿ ನೋಡಿದರು. ಆದರೆ, ಅದರಲ್ಲಿ ಯಾವುದೇ ಮಾಹಿತಿ ತೋರಿಸದ ಕಾರಣ ಆಪ್‌ನಿಂದ ಹೊರಬಂದಿದ್ದರು.
ಆದರೆ, ನಂತರದ ದಿನಗಳಲ್ಲಿ ದೂರುದಾರರ ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಖಾತೆಗಳಿಂದ ಒಟ್ಟು 1,47,399/- ರೂಪಾಯಿ ಹಣವು ಕಡಿತವಾಗಿದೆ. ಈ ರೀತಿಯಲ್ಲಿ ಅಪರಿಚಿತ ವ್ಯಕ್ತಿಗಳು ಟ್ರಾಫಿಕ್ ಚಲನ್ ಹೆಸರಿನ ಎಪಿಕೆ ಫೈಲ್ ಕಳುಹಿಸಿ, ದೂರುದಾರರ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡಿದ್ದಾರೆ. ಆ ಮಾಹಿತಿಯನ್ನು ಬಳಸಿಕೊಂಡು ಅವರ ಕೆನರಾ ಬ್ಯಾಂಕ್ ಖಾತೆಯಿಂದ ಮತ್ತು ಬ್ಯಾಂಕ್ ಆಫ್ ಬರೋಡ ಖಾತೆಯಿಂದ ಹಂತ ಹಂತವಾಗಿ ಒಟ್ಟು 1,47,399 ರೂಪಾಯಿ ಹಣವನ್ನು ಆನ್‌ಲೈನ್ ಮೂಲಕ ವಂಚನೆಯಿಂದ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ದೂರುದಾರರು, ತಮಗೆ ವಂಚಿಸಿದ ಅಪರಿಚಿತರನ್ನು ಪತ್ತೆಮಾಡಿ ಕಳೆದುಹೋದ ಹಣವನ್ನು ವಾಪಸ್ ಕೊಡಿಸಬೇಕು ಎಂದು ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.