SHIVAMOGGA | Jan 25, 2024 | :ಆಕೆ ರಾಜಸ್ಥಾನದವಳು.ಈತ ಬಾಗಲಕೋಟೆ ಮೂಲದವ.ಇಬ್ಬರಿಗೂ ಮಾತು ಬರಲ್ಲ. ಮೌನ ಪ್ರೇಮ ಗೀತೆಗೆ ಮನಸ್ಸಿನದ್ದೆ ಆಲಾಪ. ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಇವರಿಬ್ಬರು ಮದುವೆಯೂ ಆದರು. ಇನ್ನೇನು ಮೂಕ ಪ್ರೇಮ ಕಹಾನಿಯ ಕಥೆಗಳನ್ನು ಒಂದೊಂದಾಗಿಯೇ ಬದುಕಬೇಕು ಎನ್ನುವಷ್ಟರಲ್ಲಿ ಮಾತಿಲ್ಲದ ಪ್ರೀತಿಗೆ ಮಾತುಗಾರರು ಅಡ್ಡಿಯಾಗಿದ್ದಾರೆ. ಸದ್ಯ ಇವರಿಬ್ಬರ ಪ್ರೇಮದ ಸಂಕಷ್ಟ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಪ್ರೇಮಿಗಳ ಪರ ಹಲವರು ವಕಾಲತ್ತು ವಹಿಸುತ್ತಿದ್ದಾರೆ.
ಮೂಕಪ್ರೇಮಿಗಳ ಲವ್ ಸ್ಟೋರಿ
ಓದುಗರೆ, ಬಾಗಲಕೋಟೆ ಎಸ್ ಪಿ ಕಚೇರಿ ಆವರಣದಲ್ಲಿ ಒಬ್ಬಾತ ಕೈಸನ್ನೆಯ ಮೂಲಕ ತನ್ನ ನೋವನ್ನ ಅಲವತ್ತುಕೊಳ್ತಿದ್ದ. ಬರುತ್ತಿದ್ದ ಕಣ್ಣೀರನ್ನ ಒರೆಸಿಕೊಳ್ತಿದ್ದ ಆತ ಹೇಳುತ್ತಿದ್ದುದೆಲ್ಲಾ ಸತ್ಯವೇ ಆಗಿರಬಹುದು ಎಂದು ಅಲ್ಲಿದ್ದವರಿಗೆ ಅನಿಸುತ್ತಿತ್ತು.ಮಾತು ಬಾರದ ಆತನ ಹೆಸರು ಸಿದ್ದಾರ್ಥ್ ಎಂಬುದು ಆತ ತೋರಿಸಿದ ದಾಖಲೆಗಳಿಂದ ಗೊತ್ತಾಗಿತ್ತು. ಹಾಗೆ ವಿಚಾರಿಸುತ್ತಾ ಹೋದಾಗ, ಆತನ ಪ್ರೇಮಕಥೆ ತೆರೆದುಕೊಂಡಿತ್ತು.
ಇನ್ಸ್ಟಾಗ್ರಾಮ್ನಲ್ಲಿ ಪರಿಚಯ
ಬಾಗಲಕೋಟೆಯ ಮೂಲದ ಸಿದ್ದಾರ್ಥ್ ರಾಜಸ್ಥಾನ ಮೂಲದ ಯುವತಿಯೊಬ್ಬಳ ಜೊತೆಗೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಯ ಹೊಂದಿದ್ದ. ಆ ಪರಿಚಯ ಪ್ರೀತಿಗೆ ತಿರುಗಿತ್ತು. ವಿಶೇಷ ಅಂದರೆ, ಪ್ರೇಮದಲ್ಲಿಯು ಇಬ್ಬರು ಸಾಮ್ಯಥೆ ವಹಿಸಿದ್ದರು. ಅಂದರೆ ಇಬ್ಬರಿಗೂ ಮಾತು ಬರುತ್ತಿರಲಿಲ್ಲ. ಅಕ್ಷರದ ಪ್ರೀತಿಗೆ ಸಾಕ್ಷಿಯಾಗಿದ್ದ ಇಬ್ಬರು ಮದುವೆಯಾಗಲು ನಿರ್ಧರಿಸಿ ಬಾಗಲಕೋಟೆಯಲ್ಲಿಯೇ ಮದುವೆಯಾದರಂತೆ. ಹೊಸಬದುಕಲ್ಲಿ ಹೆಜ್ಜೆ ಇಡುತ್ತಿರುವಾಗಲೇ ಹುಡುಗಿ ಕಡೆಯವರು ಅಲ್ಲಿಯ ಪೊಲೀಸರ ಜೊತೆಗೆ ಬಂದು, ಈತನ ಮಡದಿಯನ್ನ ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಈತನಿಗೆ ಆಕೆಯನ್ನ ವಾಪಸ್ ಕರೆಸಿಕೊಳ್ಳಲು ಆಗುತ್ತಿಲ್ಲ. ಅಲ್ಲಿ ಆಕೆಯ ಕಡೆಯವರು ಕಿಡ್ನ್ಯಾಪ್ ದೂರು ಕೊಟ್ಟು ಪೊಲೀಸರ ಸಹಕಾರದೊಂದಿಗೆ ಯುವತಿನ್ನ ತಮ್ಮ ಮನೆಗೆ ಕರೆದೊಯ್ದಿದ್ದಾರೆ.
ಬಾಗಲಕೋಟೆ ಎಸ್ಪಿ ಬಳಿ ರಕ್ಷಣೆಗೆ ಮೊರೆ
ಇಷ್ಟೆಲ್ಲಾ ನಡೆದ ಮೇಲೆ ಯುವತಿ ಒಮ್ಮೆ ವಿಡಿಯೋ ಕಾಲ್ ಮಾಡಿ ತನ್ನನ್ನ ಕರೆದೊಯ್ಯುವಂತೆ ತಿಳಿಸಿದ್ದಾಳೆ ಎಂಬುದು ಸಿದ್ದಾರ್ಥ್ನ ಹೇಳಿಕೆ. ಅಲ್ಲದೆ ಆಕೆಯ ಜೀವ ಅಲ್ಲಿ ಅಪಾಯದಲ್ಲಿದೆ ಹೇಗಾದರೂ ರಕ್ಷಣೆ ನೀಡಿ, ತಮ್ಮನ್ನ ಒಂದು ಮಾಡಿ ಎಂದು ಬಾಗಲಕೋಟೆ ಎಸ್ಪಿ ಬಳಿ ಅಲವತ್ತು ಕೊಳ್ಳಲು ಬಂದಿದ್ದ. ಈತನಿಗೆ ಪೊಲೀಸ್ ಇಲಾಖೆಯ ಕೂಡ ಸಾಧ್ಯವಾದ ರೀತಿಯಲ್ಲಿ ಮಾನವೀಯತೆ ಅಡಿಯಲ್ಲಿ ನೆರವು ನೀಡುವುದಾಗಿ ಹೇಳಿದೆ.ಮುಂದೇನಾಗುವುದು ಗೊತ್ತಿಲ್ಲ. ಸದ್ಯಕ್ಕಂತು.,..ಈತನದ್ದು ನಿಜಕ್ಕೂ ಮೂಕರೋದನೆಯಾಗಿದೆ.
