ಮಲೆನಾಟು ಟುಡೆ ಸುದ್ದಿ/ ಶಿವಮೊಗ್ಗ : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಂದಿನ 10 ದಿನಗಳ ಬಳಿಕ ಹಾಕುವ ಬಾಂಬ್ಗೆ ಜನ ಸಾಯದೆ ಇದ್ದರೆ ಸಾಕು ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ತೀವ್ರ ವ್ಯಂಗ್ಯವಾಡಿದ್ದಾರೆ.
10 ದಿನಗಳಲ್ಲಿ ರಾಜಕೀಯದಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಡುವೆ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರ ಸ್ವಾಮಿ ಹೇಳಿಕೆಗೆ ಇಂದು ನಗರದಲ್ಲಿ ಪ್ರತಿಕ್ರಿಯಿಸಿ.ಬಿಜೆಪಿಯವರಿಗೆ ನಿರ್ದಿಷ್ಟ ದಿಕ್ಕು ದಿಸೆಯೇ ಇಲ್ಲ, ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಅವರ ಪಾಡಿಗೆ ಅವರು ಪಾದಯಾತ್ರೆ ಮಾಡಿಕೊಳ್ಳಲಿ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ಹೊಂದಾಣಿಕೆಯೇ ಇಲ್ಲ. ಬಿಜೆಪಿಯವರು ಪಾದಯಾತ್ರೆ ಮಾಡುತ್ತಿದ್ದರೆ, ಕುಮಾರಸ್ವಾಮಿ ಅವರು 10 ದಿನ ಬಿಟ್ಟು ಕರ್ನಾಟಕಕ್ಕೆ ಬರುತ್ತಾರಂತೆ ಎಂದು ಟೀಕಿಸಿದರು
ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಮಧು ಬಂಗಾರಪ್ಪ, ಹಿಂದೆ ಎಚ್.ಡಿ. ದೇವೇಗೌಡರು ಸಹ ತಮ್ಮ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳಿದ್ದರು. ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿದ್ದರು. ಆದರೆ ಈಗ ಅವರ ಜೊತೆಯಲ್ಲೇ ಹಲ್ಲು ಬಿಟ್ಟುಕೊಂಡು ಕುಳಿತುಕೊಳ್ಳುತ್ತಾರೆ. ಇದಕ್ಕೆ ಏನು ಮಾಡಲು ಸಾಧ್ಯ? ರಾಯರೆಡ್ಡಿಯವರಿಗೆ ವೈಯಕ್ತಿಕವಾಗಿ ಮಾತನಾಡಲು ಸ್ವಾತಂತ್ರ್ಯವಿದೆ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕೇಂದ್ರ ಹಾಗೂ ಬಿಜೆಪಿ ಸಂಸದರ ವಿರುದ್ಧ ಹರಿದಾಯ್ದ ಅವರು, 2013 ರಿಂದಲೇ ವರದಿಯನ್ನು ವಿರೋಧಿಸಿ ರಾಜ್ಯ ಸದನದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗಿದೆ. ನಾಡಿದ್ದು ಸಚಿವ ಸಂಪುಟ ಸಭೆ ಇದ್ದು, ಕಸ್ತೂರಿ ರಂಗನ್ ವರದಿ ವಿರೋಧಿಸಲು ವಿಶೇಷ ಸದನ ಕರೆಯುವ ದಿನಾಂಕವನ್ನು ನಿಗದಿಪಡಿಸುತ್ತೇವೆ. ಬಿಜೆಪಿ ಸಂಸದರು ದೆಹಲಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸದೆ, ಇಲ್ಲಿ ಬಂದು ಮನವಿ ನೀಡುವ ಮೂಲಕ ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
