ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದಲ್ಲಿರುವ ಅಕ್ಕಪಡೆಗೆ ಸಾಕಷ್ಟು ಸಂತ್ರಸ್ತರು ಎದುರಾಗುತ್ತಿದ್ದಾರೆ. ತಾವೊಬ್ಬರು ಅಡ್ವೋಕೇಟ್ ಅಂತಾ ಹೇಳುತ್ತಾ ಕೋರ್ಟ್ಗೆ ಹೋಗುತ್ತೇನೆ ಎಂದು ಸಾಗುತ್ತಿದ್ದ ಮಾನಸಿಕ ಅಸ್ವಸ್ಥರೊಬ್ಬರನ್ನ ಸೇವ್ ಮಾಡಿದ ಅಕ್ಕಪಡೆ ಇದೀಗ ಮತ್ತೊಂದು ಘಟನೆಯಲ್ಲಿ ಅನಾಥವಾಗಿದ್ದ ಮಹಿಳೆಯೊಬ್ಬರಿಗೆ ಆಸರೆ ಒದಗಿಸಿದೆ.
ಸಿಟಿಯಲ್ಲಿ ಹಲವಾರು ಮಂದಿ ನಾನಾ ಕಾರಣಕ್ಕೆ ಅನಾಥರಾಗಿ ಆಗಮಿಸುತ್ತಾರೆ. ಕೆಲವರನ್ನ ಬೇಕೆಂತಲೇ ಬಿಟ್ಟುಹೋಗುವರು ಇರುತ್ತಾರೆ. ಹಾಗಾಗಿಯೇ ಇದ್ದಕ್ಕಿದ್ದಂತೆ ಏರಿಯಾಗಳಲ್ಲಿ ಯಾರೋ ಅನಾಥರು, ಅಸ್ವಸ್ಥರು ದಿಢೀರ್ ಎಂಬಂತೆ ಕಾಣಸಿಗುತ್ತಾರೆ. ಎಲ್ಲಾ ಪ್ರಕರಣಗಳಲ್ಲಿಯು ಹೀಗಿರುತ್ತೆ ಎನ್ನಲಾಗದಾದರೂ ಕೆಲವಾರು ಘಟನೆಗಳು ಇದಕ್ಕೆ ಖಚಿತವಾಗಿ ಸಾಕ್ಷಿಯಾಗುತ್ತವೆ.
ಈ ನಡುವೆ ಆಶ್ರಯವಿಲ್ಲದೆ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (shivamogga ksrtc Bus Stand) ಕಳೆದ 2-3 ದಿನಗಳಿಂದ ತಂಗಿದ್ದ ಮಹಿಳೆಯನ್ನು ಗಮನಿಸಿದ ಅಕ್ಕ ಪಡೆ ಅಧಿಕಾರಿಗಳು, ಆಕೆಯನ್ನು ಸುರಕ್ಷಿತವಾಗಿ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಕ್ಕ ಪಡೆ ಅಧಿಕಾರಿಗಳು ಗಸ್ತು ನಡೆಸುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಒಬ್ಬರೇ ಇರುವುದನ್ನು ಗಮನಿಸಿದ್ದಾರೆ. ಬಳಿಕ ಆಕೆಯ ಬಳಿ ತೆರಳಿ ವಿಚಾರಣೆ ನಡೆಸಿದಾಗ, ತಾನು ತುಮಕೂರಿನವಳಾಗಿದ್ದು, ಅನಾಥೆಯಾಗಿದ್ದೇನೆ ಹಾಗೂ ತನ್ನವರು ಯಾರೂ ಇಲ್ಲ ಎಂದು ಮಹಿಳೆ ತಿಳಿಸಿದ್ದಾಳೆ. ಆಶ್ರಯಕ್ಕೆ ಬೇರೆ ವ್ಯವಸ್ಥೆ ಇಲ್ಲದ ಕಾರಣ ಕಳೆದ 2-3 ದಿನಗಳಿಂದ ಬಸ್ ನಿಲ್ದಾಣದಲ್ಲಿಯೇ ಇರುವುದಾಗಿ ಆಕೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ.
ಮಹಿಳೆಯ ಪರಿಸ್ಥಿತಿಯನ್ನು ಗಮನಿಸಿದ ಅಕ್ಕ ಪಡೆ ಅಧಿಕಾರಿಗಳು ಆಕೆಯ ಸುರಕ್ಷಿತ ಆಶ್ರಯಕ್ಕಾಗಿ ಕ್ರಮ ಕೈಗೊಂಡು, ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಸೇರಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಇನ್ನೂ ಅಕ್ಕಪಡೆ ಇದೇ ರೀತಿಯಲ್ಲಿ ಪ್ರತಿನಿತ್ಯ ಸಿಟಿಯಲ್ಲಿ ಇಂತಹ ಅನೇಕರನ್ನ ಗಮನಿಸುತ್ತಿರುತ್ತದೆ. ಕೆಲವರನ್ನ ಅಲ್ಲಿಯೇ ವಿಚಾರಿಸಿ ಅವರ ಪೋಷಕರನ್ನ ಸಂಪರ್ಕಿಸುವ ಪ್ರಯತ್ನ ಮಾಡುತ್ತದೆ. ಯಾವುದೇ ಹಿನ್ನೆಲೆ ಇರದಿದ್ದರೆ ಅಂತಹವನ್ನ ಸಖಿ ಕೇಂದ್ರಕ್ಕೆ ದಾಖಲಿಸಿ ಆಶ್ರಯ ಒದಗಿಸುತ್ತದೆ. ಇಂತಹ ಒಳ್ಳೆಯ ಕಾರ್ಯಕ್ಕಾಗಿಯೇ ಅಕ್ಕಪಡೆ ಸದಾ ಶ್ಲಾಘನೆಗೆ ಅರ್ಹ
