Nusi protest : ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯುವ ಹೇಯ ಕೃತ್ಯ ಎಸಗಿದ ವಕೀಲ ರಾಕೇಶ್ ಕಿಶೋರ್‌ರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಶಿವಮೊಗ್ಗದ ಸಿ.ಬಿ.ಆರ್. ರಾಷ್ಟ್ರೀಯ ಕಾನೂನು ಕಾಲೇಜಿನ ಎನ್.ಎಸ್.ಯು.ಐ. ಘಟಕವುಒತ್ತಾಯಿಸಿದೆ.
ನ್ಯಾಯಾಂಗವು ಭಾರತೀಯ ಸಂವಿಧಾನದ ಪ್ರಮುಖ ಸ್ತಂಭವಾಗಿದೆ. ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತ ನ್ಯಾಯಾಂಗದ ಮೇಲೆ ವಕೀಲರೊಬ್ಬರು ಅಕ್ಟೋಬರ್ 6 ರಂದು ಹಲ್ಲೆ ನಡೆಸುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಎನ್.ಎಸ್.ಯು.ಐ. ಘಟಕವು ಈ ಕೃತ್ಯವನ್ನು ಖಂಡಿಸಿದೆ.
ಹಿರಿಯ ವಕೀಲರೆಂದು ಹೇಳಿಕೊಳ್ಳುವ ರಾಕೇಶ್ ಕಿಶೋರ್, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಹೇಯ ಕೃತ್ಯಕ್ಕೆ ಮುಂದಾಗಿದ್ದಾರೆ. ನ್ಯಾಯಮೂರ್ತಿಗಳ ಮೇಲೆ ಶೂ ಎಸೆದು ಹಲ್ಲೆ ನಡೆಸಲು ಪ್ರಯತ್ನಿಸಿದ್ದು, ಇದು ದೇಶದ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ ಎಂದು ಎನ್.ಎಸ್.ಯು.ಐ. ತನ್ನ ಪ್ರಕಟಣೆಯಲ್ಲಿ ಖಂಡಿಸಿದೆ.
ಸಂವಿಧಾನದ ರಕ್ಷಕರಾದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಈ ರೀತಿ ಹಲ್ಲೆ ನಡೆಸುವಂತಹ ಕೃತ್ಯವನ್ನು ನಾವು ಸಹಿಸಲು ಸಾಧ್ಯವಿಲ್ಲ. ಈ ಘಟನೆಯು ಇಡೀ ಭಾರತೀಯರ ಮನಸ್ಸಿಗೆ ಘಾಸಿ ಉಂಟುಮಾಡಿದೆ. ನ್ಯಾಯಾಧೀಶರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಈ ರೀತಿಯ ಹೇಯ ಕೃತ್ಯ ಎಸಗಿರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಒಂದು ವೇಳೆ ಇದು ಸತ್ಯವಾದರೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನವಾಗುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಎನ್.ಎಸ್.ಯು.ಐ. ಆಗ್ರಹಿಸಿದೆ.
ಹಲ್ಲೆ ನಡೆಸಿದ ವಕೀಲರನ್ನು ಈಗಾಗಲೇ ವಕೀಲರ ಪರಿಷತ್ ಅಮಾನತು ಮಾಡಿದೆ. ಆದರೆ, ರಾಕೇಶ್ ಕಿಶೋರ್‌ರನ್ನು ಕೇವಲ ಅಮಾನತು ಮಾಡಿದರೆ ಸಾಲದು, ಅವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲವಾದರೆ ಇಂತಹ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ರಾಕೇಶ್ ಕಿಶೋರ್‌ರನ್ನು ಬಂಧಿಸಿ ಶಿಕ್ಷಿಸುವಂತೆ ಈ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳನ್ನು ಒತ್ತಾಯಿಸಲಾಗುತ್ತಿದೆ ಎಂದು ಎನ್.ಎಸ್.ಯು.ಐ. ಘಟಕ ತಿಳಿಸಿದೆ.