ಶಿವಮೊಗ್ಗ ಮಲೆನಾಡುಟುಡೆ ನ್ಯೂಸ್ : ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆಯನ್ನು ಗೋವರ್ಧನ ಟ್ರಸ್ಟ್, ವಾಸವಿ ವಿದ್ಯಾಲಯ, ಇಸ್ಕಾನ್ ಶಿವಮೊಗ್ಗ ಮತ್ತು ಬಾಲ ಗೋಕುಲ ಸಂಸ್ಥೆಗಳು ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿವೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸೆಪ್ಟೆಂಬರ್ 5ರ ಶನಿವಾರ ಸಂಜೆ 4 ಗಂಟೆಗೆ ಕೋಟೆ ರಸ್ತೆಯಲ್ಲಿರುವ ವಾಸವಿ ವಿದ್ಯಾಲಯ ಸಂಕೀರ್ಣದಲ್ಲಿ ಶಿವಮೊಗ್ಗದ ಮಕ್ಕಳು, ಯುವಕ-ಯುವತಿಯರು ಹಾಗೂ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾಹಿತಿ ಹಂಚಿಕೊಂಡ ಗೋವರ್ಧನ ಟ್ರಸ್ಟ್ನ ಖಜಾಂಚಿ ಶೇಷಾಚಲ ಅವರು, 5 ವರ್ಷದೊಳಗಿನ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಇರಲಿದೆ ಎಂದರು. 5 ರಿಂದ 10 ವರ್ಷದ ಮಕ್ಕಳು ಹಾಗೂ ಅವರ ತಾಯಂದಿರಿಗಾಗಿ ಯಶೋಧ-ಕೃಷ್ಣ ರೂಪಕ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಯಸ್ಸಿನ ಮಿತಿ ಇಲ್ಲದೆ ಮೊದಲು ನೋಂದಾಯಿಸಿಕೊಳ್ಳುವ 20 ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ. 13 ರಿಂದ 18 ವರ್ಷದ ಯುವಕ-ಯುವತಿಯರಿಗೆ ಮಡಿಕೆ ಒಡೆಯುವ ಸ್ಪರ್ಧೆ’ಯನ್ನು ಏರ್ಪಡಿಸಲಾಗಿದ್ದು, 10 ಸ್ಪರ್ಧಿಗಳನ್ನೊಳಗೊಂಡ ಯುವಕರ 5 ಹಾಗೂ ಯುವತಿಯರ 5 ತಂಡಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ವಯೋಮಿತಿ ದೃಢೀಕರಣಕ್ಕೆ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಇದೇ ವೇಳೆ ಇಸ್ಕಾನ್ ಶಿವಮೊಗ್ಗ, ಶ್ರೀ ಶಾರದಾ ನೃತ್ಯ ಕಲಾಕೇಂದ್ರ, ನಾಟ್ಯಪ್ರಿಯಾ ನೃತ್ಯ ಕಲಾಕೇಂದ್ರ ಹಾಗೂ ಶ್ರೀ ಸಾಯಿವೃಂದ ಸುಗಮ ಸಂಗೀತ ಶಾಲೆಯ ಕಲಾವಿದರಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ಎಸ್.ಪಿ.ಎಂ. ರಸ್ತೆಯ ಗೋವರ್ಧನ ಟ್ರಸ್ಟ್ ಕಚೇರಿ ಅಥವಾ ಕೋಟೆ ರಸ್ತೆಯ ವಾಸವಿ ವಿದ್ಯಾಲಯದ ಕಚೇರಿಯಲ್ಲಿ ಅರ್ಜಿ ನಮೂನೆಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9964586181, 9742162266, 9481504737 ಹಾಗೂ 8277083025 ನಂಬರ್ಗಳನ್ನು ಸಂಪರ್ಕಿಸಿ.
