BPL Card Cancellation ಶಿವಮೊಗ್ಗ: ಆದಾಯ ತೆರಿಗೆ (ಐಟಿ) ಇಲಾಖೆಗೆ ಸಲ್ಲಿಸಿದ ರಿಟರ್ನ್ಸ್ ಮಾಹಿತಿ ಮತ್ತು ಜಿಎಸ್‌ಟಿ ಪಾವತಿ ದಾಖಲೆಗಳನ್ನು ಆಧರಿಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ದೊಡ್ಡಮಟ್ಟದ ಬಿಪಿಎಲ್ ಕಾರ್ಡ್ ಶುದ್ಧೀಕರಣ ಅಭಿಯಾನ ನಡೆಸಿದೆ.ಈ ಅಭಿಯಾನದಲ್ಲಿ ಅಕ್ಟೋಬರ್ ತಿಂಗಳೊಂದರಲ್ಲೇ ಬರೋಬ್ಬರಿ 6,200 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಮಾಡಿ ರದ್ದುಗೊಳಿಸಲಾಗಿದೆ. ಅನರ್ಹವೆಂದು ಕಂಡುಬಂದ ಈ ಎಲ್ಲಾ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.
ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ದಾರರ ಪತ್ತೆ ಕಾರ್ಯ ತೀವ್ರಗೊಂಡಿದ್ದು, ಬ್ಯಾಂಕ್ ಖಾತೆಗೆ ಜೋಡಣೆಯಾದ ಆಧಾರ್ ಸಂಖ್ಯೆ ಮತ್ತು ಐಟಿ ರಿಟರ್ನ್ಸ್ ಪ್ರತಿ ಪ್ರಮುಖ ಪಾತ್ರ ವಹಿಸಿದೆ. ಇದರ ಜೊತೆಗೆ, 25 ಲಕ್ಷಕ್ಕೂ ಅಧಿಕ ಮೊತ್ತದ ಜಿಎಸ್‌ಟಿ ಪಾವತಿಸಿರುವ 50ಕ್ಕೂ ಹೆಚ್ಚು ವಹಿವಾಟುದಾರರ ಬಿಪಿಎಲ್ ಕಾರ್ಡ್‌ಗಳನ್ನು ಸಹ ರದ್ದುಪಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 3.80 ಲಕ್ಷ ಬಿಪಿಎಲ್ ಕುಟುಂಬಗಳಿದ್ದು, ಅನರ್ಹರ ಪತ್ತೆ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
BPL Card Cancellation ಹೊಸ ಕಾರ್ಡ್‌ಗೆ ನವೆಂಬರ್ ಅಂತ್ಯದವರೆಗೆ ಕಾಯಬೇಕು:
ಇದೇ ವೇಳೆ, ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿರುವ 3,400 ಮಂದಿಯ ಅರ್ಜಿಗಳ ಪರಿಶೀಲನೆ ಪ್ರಗತಿಯಲ್ಲಿದೆ. ನವೆಂಬರ್ ಅಂತ್ಯಕ್ಕೆ ಸರ್ಕಾರದಿಂದ ಅನುಮತಿ ದೊರೆತ ಬಳಿಕ ಅರ್ಹರಿಗೆ ಹೊಸ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
 
 

 
  
  
  
 