ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ ನಡೆಯಲಿರುವ ಹಲವು ಸಾಂಸ್ಕೃತಿಕ, ಕ್ರೀಡಾ, ಸಾಹಿತ್ಯ ಹಾಗೂ ಜಾನಪದ ಕಾರ್ಯಕ್ರಮಗಳ ವಿವರ ಹೀಗಿದೆ. ಗಣೇಶೋತ್ಸವಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಮೆಸ್ಕಾಂ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಿದ್ದು, ಸೆಪ್ಟೆಂಬರ್ 10ರಂದು ಸಣ್ಣಗೌಡಸಾನ’ ನಾಟಕ ಪ್ರದರ್ಶನ, ಮೈಸೂರು ದಸರಾ ಕರಾಟೆ ಆಯ್ಕೆ ಪ್ರಕ್ರಿಯೆ ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾತು ಮಂಥನ ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್ 11ರಂದು ಶಾಲಾ-ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
ಗಣೇಶೋತ್ಸವಕ್ಕೆ ಏಕಗವಾಕ್ಷಿ ಪದ್ಧತಿಯಲ್ಲಿ ವಿದ್ಯುತ್ ಮಂಜೂರಾತಿ
ಸಾರ್ವತ್ರಿಕ ಗಣೇಶೋತ್ಸವದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಉಪವಿಭಾಗ-3ರ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಯೋಜಕರಿಗೆ ಏಕಗವಾಕ್ಷಿ ಪದ್ಧತಿಯಡಿ ವಿದ್ಯುತ್ ಮಂಜೂರಾತಿ ನೀಡಲು ಮೆಸ್ಕಾಂ ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 9ರಿಂದ 14ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ನಗರ ಉಪವಿಭಾಗ-3, ಮೆಸ್ಕಾಂ ಕಚೇರಿ, ಗುಡ್ ಲಕ್ ವೃತ್ತದ ಸಮೀಪದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ವಿದ್ಯುತ್ ಮಂಜೂರಾತಿ ಪ್ರಕ್ರಿಯೆ ನಡೆಯಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸೆ.10ರಂದು ‘ಸಣ್ಣಗೌಡಸಾನಿ’ ನಾಟಕ ಪ್ರದರ್ಶನ
ಶಿವಮೊಗ್ಗ ರಂಗಾಯಣದ ಸುವರ್ಣ ಸಂಸ್ಕೃತಿ ಭವನದಲ್ಲಿ ಸೆಪ್ಟೆಂಬರ್ 10ರಂದು ಸಂಜೆ 6.30ಕ್ಕೆ ಕಲಬುರಗಿ ರಂಗಾಯಣ ಪ್ರಸ್ತುತಿಯ ‘ಸಣ್ಣಗೌಡಸಾನಿ’ ನಾಟಕ ಪ್ರದರ್ಶನ ನಡೆಯಲಿದೆ.ನಾಡೋಜ ಡಾ. ಶಾಂತರಸ ಅವರ ಕಾದಂಬರಿಯನ್ನು ಆಧರಿಸಿ ಈ ನಾಟಕ ರೂಪಿಸಲಾಗಿದೆ. ಮಹಾಂತೇಶ ನವಲ್ಕರ್ ಪರಿಕಲ್ಪನೆ ಮತ್ತು ನಿರ್ದೇಶನ ಮಾಡಿದ್ದಾರೆ. ನಾಟಕ ಪ್ರದರ್ಶನದ ಟಿಕೆಟ್ ದರ ₹30 ನಿಗದಿಪಡಿಸಲಾಗಿದೆ.
ಮೈಸೂರು ದಸರಾ ಕರಾಟೆಗೆ ಸೆ.10ರಂದು ಜಿಲ್ಲಾ ಆಯ್ಕೆ
ಮೈಸೂರು ದಸರಾ ಕ್ರೀಡಾಕೂಟ-2026ರ ಕರಾಟೆ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಸ್ಪರ್ಧಿಸುವ ಕ್ರೀಡಾಪಟುಗಳ ಆಯ್ಕೆಗಾಗಿ ಸೆಪ್ಟೆಂಬರ್ 10ರಂದು ನಗರದ ನೆಹರು ಒಳ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 16 ವರ್ಷ ಮೇಲ್ಪಟ್ಟ ಮಹಿಳಾ ಹಾಗೂ ಪುರುಷ ಕ್ರೀಡಾಪಟುಗಳಿಗೆ ವಿವಿಧ ತೂಕದ ಆಧಾರದಲ್ಲಿ ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ಪ್ರತ್ಯೇಕ ಆಯ್ಕೆ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅದೇ ದಿನ ನೆಹರು ಒಳ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದ್ದು, ಅದರ ಭಾಗವಾಗಿಯೇ ಕರಾಟೆ ಸ್ಪರ್ಧೆಗಳು ನಡೆಯಲಿವೆ.
ಜಿಲ್ಲಾ ಮಟ್ಟದಲ್ಲಿ ಪ್ರತಿ ವಿಭಾಗದಿಂದ ಇಬ್ಬರು ಕ್ರೀಡಾಪಟುಗಳನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ನಂತರ ವಿಭಾಗ ಮಟ್ಟದಿಂದ ಪ್ರತಿ ತೂಕದ ವಿಭಾಗದಲ್ಲಿ ಇಬ್ಬರನ್ನು ರಾಜ್ಯ ಮಟ್ಟದ ಮೈಸೂರು ದಸರಾ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುತ್ತದೆ.ಆಯ್ಕೆಯಾದ ಕ್ರೀಡಾಪಟುಗಳು ವಿಭಾಗ ಮಟ್ಟದ ಸ್ಪರ್ಧೆಗೆ ತೆರಳಲು ಡಿಎ ಮತ್ತು ಟಿಎ ನೀಡಲಾಗುತ್ತದೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದವರಿಗೆ ಕ್ರೀಡಾ ಸಮವಸ್ತ್ರವನ್ನು ಇಲಾಖೆಯಿಂದ ಒದಗಿಸಲಾಗುವುದು ಎಂದು ವಿನೋದ್ ತಿಳಿಸಿದ್ದಾರೆ.ಆಯ್ಕೆ ಪ್ರಕ್ರಿಯೆ ಕುರಿತು https://dasaracmcup.in ಮೂಲಕ ಮಾಹಿತಿ ಪಡೆಯಬಹುದಾಗಿದ್ದು, ಸಹಾಯವಾಣಿ ಸಂಖ್ಯೆ 155265 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಇದೇ ವೇಳೆ ಜಿಲ್ಲಾ ಕರಾಟೆ ಅಸೋಸಿಯೇಷನ್ ಸಹ ಕಾರ್ಯದರ್ಶಿಯಾಗಿ ಶಿಕಾರಿಪುರದ ಕರಾಟೆ ತರಬೇತುದಾರ ಮಿಥುನ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖೀಬ್ ಅಹಮ್ಮದ್, ಬಾಲರಾಜ್, ಮೀನಾಕ್ಷಿ, ದೇವರಾಜ್, ನರಸಿಂಹ ಸ್ವಾಮಿ, ಇರ್ಫಾನ್ ಮತ್ತು ಹರೀಶ್ ಉಪಸ್ಥಿತರಿದ್ದರು.
ಕುವೆಂಪು ವಿವಿಯಲ್ಲಿ ‘ಮಾತು ಮಂಥನ’ ಮತ್ತು ಕಲಾ ಪ್ರದರ್ಶನ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಹಾಗೂ ತುಮಕೂರಿನ ಸ್ವರಸಿಂಚನ ಸುಗಮ ಸಂಗೀತ ಜಾನಪದ ಸಂಸ್ಥೆ ಸಹಯೋಗದಲ್ಲಿ ಸೆಪ್ಟೆಂಬರ್ 10ರಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ‘ಮಾತು ಮಂಥನ’ ಹಾಗೂ ಕಲಾ ಪ್ರದರ್ಶನ ನಡೆಯಲಿದೆ.ಬೆಳಗ್ಗೆ 10ಕ್ಕೆ ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಉದ್ಘಾಟಿಸಲಿದ್ದು, ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ಭಾಗವಹಿಸಲಿದ್ದಾರೆ.
‘ಜಾನಪದದ ಪುನರ್ ಪರಿಕಲ್ಪನೆ; ಸಮುದಾಯಗಳ ಅಧ್ಯಯನದ ಹೊಸ ದೃಷ್ಟಿಕೋನಗಳು’ ವಿಷಯದ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ಎರಡನೇ ಗೋಷ್ಠಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ.ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಭಾರತಿ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತ ನಾಯಕ್ ಸಮಾರೋಪ ಭಾಷಣ ಮಾಡಲಿದ್ದಾರೆ.
ಸೆ.11ರಂದು ಶಾಲಾ-ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದೇಶೀಯ ವಿದ್ಯಾಶಾಲಾ ಸಮಿತಿಯ ಸಹಯೋಗದಲ್ಲಿ ಸೆಪ್ಟೆಂಬರ್ 11ರಂದು ನಗರದ ಡಿವಿಎಸ್ ಪದವಿ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಶಾಲಾ-ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿ ಪ್ರೊ. ಶ್ರೀಕಂಠ ಕೂಡಿಗೆ ಕಾರ್ಯಕ್ರಮ ಉದ್ಘಾಟಿಸಿ ಪುಸ್ತಕ ವಿತರಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಧ್ಯಕ್ಷತೆ ವಹಿಸಲಿದ್ದಾರೆ.
‘ಕನ್ನಡ ಪುಸ್ತಕಗಳ ಡಿಜಿಟಲ್ ಜಗತ್ತು ಹಾಗೂ ನಾವು’ ವಿಷಯದ ಕುರಿತು ಸಂಚಿ ಫೌಂಡೇಶನ್ ಡಿಜಿಟಲ್ ಆರ್ಕೆವಿಸ್ಟ್ ಓಂ ಶಿವಪ್ರಕಾಶ್ ಉಪನ್ಯಾಸ ನೀಡಲಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ಡಿವಿಎಸ್ ರಿಜಿಸ್ಟ್ರಾರ್ ಪ್ರೊ. ಎಂ. ವೆಂಕಟೇಶ್ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಂಯೋಜಕಿ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿರಲಿದ್ದಾರೆ.
