ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲಾದ್ಯಂತ ಇಂದು ಆ.26ರಂದು ಈದ್ ಮಿಲಾದ್ ಹಬ್ಬ (Eid Milad) ನಡೆಯಲಿದೆ. ಈ ಹಿನ್ನೆಲೆಯಲ್ಲಿ , ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಯಾವುದೇ ಗೊಂದಲ ಉಂಟಾಗದಂತೆ ಹಾಗೂ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಲಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ನಿನ್ನೆ ದಿನ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳವಾರ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್ ನಡೆಸಲಾಯಿತು.














ಈದ್ ಮಿಲಾದ್ ಹಬ್ಬದ ಭದ್ರತೆಗಾಗಿ ಜಿಲ್ಲೆಯಲ್ಲಿ ಸುಮಾರು 3000 ಪೊಲೀಸರನ್ನು ನಿಯೋಜಿಸಲಾಗಿದೆ. 12 ಕೆಎಸ್ಆರ್ಪಿ ತುಕಡಿಗಳು, 1 ಆರ್ಎಎಫ್ ತುಕಡಿ ಹಾಗೂ 1 ಎಸ್ಐಆರ್ ತುಕಡಿ ಜಿಲ್ಲೆಗೆ ಆಗಮಿಸಿವೆ. ಇವುಗಳ ಜತೆಗೆ 21 ಡಿಆರ್ ತುಕಡಿಗಳನ್ನೂ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಹಬ್ಬದ ಸಂದರ್ಭದಲ್ಲಿ ನಿಗದಿಪಡಿಸಿರುವ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ. ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಬಹುದಾದವರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ 13 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಇದೇ ವೇಳೆ 312 ಮಂದಿಯ ವಿರುದ್ಧ ಸೆಕ್ಯುರಿಟಿ ಪ್ರೊಸೀಡಿಂಗ್ಸ್ ಅನ್ನು ಪೊಲೀಸ್ ಇಲಾಖೆ ಆರಂಭಿಸಿದೆ ಎಂದು ಎಸ್ಪಿ ನಿಖಿಲ್ ಬಿ ತಿಳಿಸಿದ್ದಾರೆ.
ಇನ್ನೂ ಹಬ್ಬದ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಮಂಗಳವಾರ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಡಿಎಆರ್ ಮೈದಾನದಿಂದ ಆರಂಭವಾದ ರೂಟ್ ಮಾರ್ಚ್ ಅಶೋಕ ವೃತ್ತ, ಎನ್ಟಿ ರಸ್ತೆ, ಒಟಿ ರಸ್ತೆ, ಅಮೀರ್ ಅಹ್ಮದ್ ವೃತ್ತ, ಎಂಕೆಕೆ ರಸ್ತೆ ಹಾಗೂ ಗಾಂಧಿ ಬಜಾರ್ ಮೂಲಕ ಸಾಗಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ಮುಕ್ತಾಯಗೊಂಡಿತು. ರೂಟ್ ಮಾರ್ಚ್ನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ, ಡಿವೈಎಸ್ಪಿ ಸಂಜೀವ್ ಕುಮಾರ್ ಸೇರಿದಂತೆ ಪೊಲೀಸ್ ಇಲಾಖೆಯ ಇತರೆ ಸಿಬ್ಬಂದಿ ಪಾಲ್ಗೊಂಡಿದ್ದರು.