ಶಿವಮೊಗ್ಗ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಹಕಾರಿ ರಂಗದ ಚುನಾಯಿತ ಪ್ರತಿನಿಧಿಗಳಿಗೆ ಜಾರಿಗೆ ತಂದಿರುವ ಕೂಲಿಂಗ್ ಪೀರಿಯಡ್ ನಿಯಮದಿಂದ ಅನುಭವಿ ನಾಯಕರ ಸೇವೆಯಿಂದ ಸಂಸ್ಥೆಗಳು ವಂಚಿತವಾಗಲಿವೆ. ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಹಾಗೂ ಡಿ.ಸಿ.ಸಿ. ಬ್ಯಾಂಕ್ ಮಾಜಿ ನಿರ್ದೇಶಕ ಎಸ್.ಪಿ. ಶೇಷಾದ್ರಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಬಿಐ ಹೊರಡಿಸಿರುವ ‘ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳ ನಿರ್ವಹಣೆ ತಿದ್ದುಪಡಿ ನಿರ್ದೇಶನಗಳು 2026’ ನಿಯಮದ ಪ್ರಕಾರ, ಸಹಕಾರಿ ಕ್ಷೇತ್ರದಲ್ಲಿ ಚುನಾಯಿತ ಪ್ರತಿನಿಧಿಗಳು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ನಂತರ ಕಡ್ಡಾಯವಾಗಿ 3 ವರ್ಷಗಳ ಕಾಲ ಅಧಿಕಾರದಿಂದ ದೂರವಿರಬೇಕಾಗುತ್ತದೆ
ಇನ್ನೊಂದೆಡೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ತಿದ್ದುಪಡಿ ಮಸೂದೆ 2026′ ಮೂಲಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (PACS) ನೇರವಾಗಿ ಸಾಲ ಹಾಗೂ ಅನುದಾನ ನೀಡಲು ನಿಗಮದ ಅಧಿಕಾರ ವಿಸ್ತರಿಸಿ, ಕ್ಷೇತ್ರಕ್ಕೆ ಉತ್ತೇಜನ ನೀಡಲಾಗುತ್ತಿದೆ. ಆದರೆ, ಆರ್‌ಬಿಐನ ಈ ನೂತನ ನಿಯಮವು NCDCಯ ಸುಧಾರಣೆಗಳಿಗೆ ಹಿನ್ನಡೆ ಉಂಟುಮಾಡಲಿದೆ. ಶಾಸಕರು, ಸಂಸದರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಇಲ್ಲದ ಈ ನಿಯಮವನ್ನು ಕೇವಲ ಸಹಕಾರಿ ಕ್ಷೇತ್ರಕ್ಕೆ ಮಾತ್ರ ಅನ್ವಯಿಸಿರುವುದು ಸಾಮಾಜಿಕ ಅನ್ಯಾಯವಾಗಿದೆ. ಆದ್ದರಿಂದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಹಾಗೂ ಆರ್‌ಬಿಐ ಅಧಿಕಾರಿಗಳು ಈ ಬಗ್ಗೆ ಮರುಪರಿಶೀಲನೆ ನಡೆಸಿ,ಕೂಲಿಂಗ್ ಪೀರಿಯಡ್ ಆದೇಶವನ್ನು ಹಿಂಪಡೆದು ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದರು.
