ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸೋಗಾನೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿದ್ದ ಪ್ರಿಸನ್ ಕಾಲ್ ಸಿಸ್ಟಂ (Prison Call System) ಉಪಕರಣದ ಪರದೆಯನ್ನು ಹಾನಿಗೊಳಿಸಿದ ಆರೋಪದ ಮೇಲೆ ಐವರು ವಿಚಾರಣಾಧೀನ ಬಂದಿಗಳ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈದಿಗಳು ತಮ್ಮ ಕುಟುಂಬದ ಸದಸ್ಯರು ಹಾಗೂ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರೊಂದಿಗೆ ಮಾತನಾಡಲು ಅನುಕೂಲವಾಗುವಂತೆ ಕೇಂದ್ರ ಕಾರಾಗೃಹದಲ್ಲಿ ಒಟ್ಟು 10 ಪ್ರಿಸನ್ ಕಾಲ್ ಸಿಸ್ಟಂ ಉಪಕರಣ ಅಳವಡಿಸಲಾಗಿದೆ. ಪ್ರತಿ ಪಿಸಿಎಸ್ ಉಪಕರಣದ ಮೌಲ್ಯ ₹1,64,295. ಈ ಮಧ್ಯೆ ಬಂದಿಗಳ ಕುಮುದ್ವತಿ ವಿಭಾಗದಲ್ಲಿ ಕಳೆದ ಆಗಸ್ಟ್ 21ರಂದು ವಿಚಾರಣಾಧೀನ ಕೈದಿಗಳು ಪಿಸಿಎಸ್ ಬೂತ್ನೊಳಗೆ ಪ್ರವೇಶಿಸಿ, ಉಪಕರಣದ ಪರದೆಯನ್ನು ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಪಿ. ನೀಡಿದ ದೂರಿನನ್ವಯ ಕೇಸ್ ದಾಖಲಾಗಿದ್ದು, ಸರ್ಕಾರಿ ಆಸ್ತಿಗೆ ಹಾನಿ ಮಾಡಿರುವ ಆರೋಪದ ಅಡಿಯಲ್ಲಿ ಬಿಎನ್ಎಸ್ ಕಲಂ 324(3), 324(5) ಮತ್ತು 190ರ ಅನ್ವಯ ಪ್ರಕರಣ ದಾಖಲಾಗಿದೆ.
