ಯುವನಿಧಿ ಫಲಾನುಭವಿಗಳೇ ಗಮನಿಸಿ: ಇನ್ಮುಂದೆ ಹೀಗೆ ಮಾಡದಿದ್ರೆ ನಿಮ್ಮ ಅಕೌಂಟ್​ಗೆ ಹಣ ಬರಲ್ಲ

Yuvanidhi ಶಿವಮೊಗ್ಗ: ರಾಜ್ಯ ಸರ್ಕಾರ ಈಗಾಗಲೇ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ದುರ್ಬಳಕೆಯಾಗುವುದನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿರೋದು ಗೊತ್ತೇ ಇದೆ. ಇದರ ನಡುವೆ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ದುರ್ಬಳಕೆಯನ್ನು ತಡೆಯಲು ತನ್ನ ಹಳೆ ನಿಯಮದಲ್ಲಿ ಸ್ವಲ್ಪ ಬದಲಾವಣೆಯನ್ನು ತಂದಿದೆ . ಈ ಹಿಂದೆ ಜಾರಿಯಲ್ಲಿದ್ದ ನಿಯಮದ ಪ್ರಕಾರ ಫಲಾನುಭವಿಗಳು ಕೇವಲ ಮೂರು ತಿಂಗಳಿಗೊಮ್ಮೆ ಮಾತ್ರ ಲಾಗಿನ್ ಆಗಬೇಕಿತ್ತು, ಆದರೆ ಈಗ ಅದರಲ್ಲಿ ಪ್ರಮುಖ ಮಾರ್ಪಾಡು ಮಾಡಲಾಗಿದೆ.

ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಅನುಷ್ಠಾನಗೊಳಿಸುವ ಭಾಗವಾಗಿ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯು ದಿ:26-12-2023 ರಂದು ಆರಂಭವಾಗಿತ್ತು. ಆದರೆ ಈಗ ಜಿಲ್ಲೆಯ ಫಲಾನುಭವಿಗಳು ಈ ಹಿಂದೆ ಇದ್ದಂತೆ ತ್ರೈಮಾಸಿಕ ಬದಲಾಗಿ, ಪ್ರತಿ ತಿಂಗಳು 25 ನೇ ತಾರೀಖಿನೊಳಗೆ ಕಡ್ಡಾಯವಾಗಿ ಆನ್ ಲೈನ್ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಸ್ವಯಂ ಘೋಷಣೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ನಿಗದಿತ ದಿನಾಂಕದೊಳಗೆ ಸ್ವಯಂ ಘೋಷಣೆ ನೀಡದಿದ್ದಲ್ಲಿ, ಆಯಾ ತಿಂಗಳ ನೇರ ನಗದು ವರ್ಗಾವಣೆಮೂಲಕ ಬ್ಯಾಂಕ್ ಖಾತೆಗೆ ಜಮೆಯಾಗುವ ಭತ್ಯೆಯ ಹಣ ಸ್ಥಗಿತಗೊಳ್ಳಲಿದೆ.

ಕಳೆದ 2025 ರಲ್ಲಿ ಪದವಿ ಅಥವಾ ಡಿಪ್ಲೋಮೋ ಶಿಕ್ಷಣ ಮುಗಿಸಿ ಉತ್ತೀರ್ಣರಾದ ಅಭ್ಯರ್ಥಿಗಳು, ಶಿಕ್ಷಣ ಮುಗಿಸಿ 6 ತಿಂಗಳಾದರೂ ಯಾವುದೇ ಉದ್ಯೋಗ ಸಿಗದೆ ನಿರುದ್ಯೋಗಿಗಳಾಗಿದ್ದರೆ ಅಂತಹವರು ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ಅರ್ಹ ಪದವೀಧರರಿಗೆ ಪ್ರತಿ ತಿಂಗಳು ರೂ. 3,000 ಹಾಗೂ ಡಿಪ್ಲೋಮೋ ಪದವೀಧರರಿಗೆ ರೂ. 1,500 ನಿರುದ್ಯೋಗ ಭತ್ಯೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ನೀಡಲಾಗುವುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Yuvanidhi Self Declaration Mandatory Every Month